ಬಂಟ್ವಾಳ: ವಿಟ್ಲದ ಕಾನತ್ತಡ್ಕದ ಮನೆಯೊಂದರಲ್ಲಿ ಒಂಟಿ ಮಹಿಳೆ ಇದ್ದಿದ್ದನ್ನು ಮನಗಂಡ ಖದೀಮನೊಬ್ಬ ಹಾಡಹಗಲೇ ನುಗ್ಗಿ ಆಕೆಯ ಕೈ ಕಟ್ಟಿ ಹಾಕಿ, ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಾನತ್ತಡ್ಕದ ಬಾಡಿಗೆ ಮನೆಯಲ್ಲಿ ಆಟೋ ಚಾಲಕ ರಫೀಕ್ ವಾಸ ಮಾಡುತ್ತಿದ್ದು, ತನ್ನ 10 ವರ್ಷದ ಮಗನ ಜತೆಗೆ ಶುಕ್ರವಾರದ ಪ್ರಾರ್ಥನೆಗೆಂದು ಮನೆಯ ಮುಂಭಾಗದಲ್ಲಿರುವ ಜುಮಾ ಮಸೀದಿಗೆ ತೆರಳಿದ್ದರು. ಪತ್ನಿ ಜೈನಾಬ ಒಬ್ಬರೇ ಮನೆಯಲ್ಲಿದ್ದರು. ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡಿರುವ ವ್ಯಕ್ತಿಯೊಬ್ಬ ಮನೆಯೊಳಗಡೆ ನುಗ್ಗಿ ಹಿಂದಿನಿಂದ ಬಂದು ಮಹಿಳೆಯ ಕೈಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯ ಒಂದು ಜತೆ ಕಿವಿಯೋಲೆ, ಉಂಗುರ ಹಾಗೂ ಚೈನ್ ಕಿತ್ತುಕೊಂಡು ಮುಂಬಾಗಿಲಿಗೆ ಚಿಲಕ ಹಾಕಿ ಹಿಂಬದಿ ಬಾಗಿಲಿನಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಓದಿ: ರಾಜ್ಯದಲ್ಲಿಂದು 1,005 ಜನರಿಗೆ ಕೊರೊನಾ: 5 ಮಂದಿ ಬಲಿ
ಪತಿ ಮಸೀದಿಯಿಂದ ವಾಪಸಾದಾಗ ಮನೆಯ ಮುಂಬಾಗಿಲು ಮುಚ್ಚಿದ್ದ ಸ್ಥಿತಿಯಲ್ಲಿತ್ತು. ಬಳಿಕ ಹಿಂಬಾಗಿಲ ಮೂಲಕ ಮನೆಯೊಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯಿಂದ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರಿಂದ ತಕ್ಷಣವೇ ಅವರನ್ನು ವಿಟ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿದ ಬಂಟ್ವಾಳ ವೃತ್ತ ನಿರೀಕ್ಷಕ ನಾಗರಾಜ್, ವಿಟ್ಲ ಎಸ್ಐ ವಿನೋದ್ ಕುಮಾರ್ ರೆಡ್ಡಿ, ಸಿಬ್ಬಂದಿ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಕಪಾಟನ್ನು ಜಾಲಾಡಿದ್ದು, ಅಲ್ಲಿ ಯಾವುದೇ ವಸ್ತುಗಳು ಸಿಕ್ಕಿಲ್ಲ. ಮನೆಯ ಬಟ್ಟೆಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡುಬಂದಿದೆ.