ಮಂಗಳೂರು: ಸಾಮಾನ್ಯವಾಗಿ ಭಾರಿ ಗಾತ್ರದ ವಾಹನಗಳನ್ನು ಜಾಕ್ ಕೊಟ್ಟು ಮೇಲೆತ್ತುವುದನ್ನು ನಾವು ನೋಡುತ್ತಿರುತ್ತೇವೆ. ಆದರೆ, ಇಲ್ಲೊಂದು ಕಡೆ ಮನೆಯನ್ನೇ ಜಾಕ್ ಕೊಟ್ಟು ಮೂರಡಿ ಲಿಫ್ಟ್ ಮಾಡಲಾಗಿದೆ. ಇಂತಹ ಸಾಹಸ ಕಾರ್ಯಕ್ಕೆ ವರ್ಷಾನುಗಟ್ಟಲೇ ಸಂಕಷ್ಟದ ಗೋಳು ತುಂಬಿರುವುದೇ ಕಾರಣ ಎಂದರೆ ನೀವು ನಂಬಲೇಬೇಕು.
ಹೌದು, ಮಳೆಗಾಲಕ್ಕಿಂತ ಮೊದಲು ರಾಜಕಾಲುವೆಯಿಂದ ಹೂಳೆತ್ತುವ ಕಾರ್ಯ ಸಮರ್ಪಕವಾಗಿ ನಡೆಯದ ಪರಿಣಾಮ ಮಂಗಳೂರು ನಗರದ ಕೊಟ್ಟಾರ ಚೌಕಿ, ಮಾಲೆಮಾರ್, ಮಾಲಾಡಿ ಪ್ರದೇಶಗಳಲ್ಲಿ ಭಾರಿ ಮಳೆಗೆ ಕೃತಕ ನೆರೆ ಬಾಧಿಸುವುದು ಸರ್ವೇ ಸಾಮಾನ್ಯ.
ಈ ಸಂದರ್ಭ ಅಲ್ಲಿನ ನಿವಾಸಿಗಳ ಪಾಡು ದೇವರಿಗೆ ಪ್ರೀತಿ. ಈ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳ ಬಳಿಗೆ ಎಡತಾಕಿದರೂ ಸದ್ಯದ ಪರಿಸ್ಥಿತಿಗೆ ಪರಿಹಾರ ದೊರಕುತ್ತದೆಯೇ ವಿನಃ ಶಾಶ್ವತ ಪರಿಹಾರ ಮರೀಚಿಕೆಯಾಗಿತ್ತು. ಈ ಎಲ್ಲಾ ಸಂಕಷ್ಟದಿಂದ ಬೇಸತ್ತು ಮಾಲೇಮಾರ್ ಸುರೇಶ್ ಉಡುಪ ಎಂಬುವರು ತಮ್ಮ ಮನೆಯನ್ನೇ ಮೂರಡಿ ಮೇಲೆತ್ತುವ ತಂತ್ರಜ್ಞಾನದ ಮೊರೆಹೋಗಿದ್ದಾರೆ.
ಮನೆಯನ್ನು ಮೇಲೆತ್ತುವ ಕಾರ್ಯವು ಡಿ. 9ರಂದು ಆರಂಭವಾಗಿದ್ದು, ಕಾಮಗಾರಿ ಆರಂಭವಾಗಿ ಈಗಾಗಲೇ ಮೂರು ವಾರಗಳಾಗಿವೆ. ಮನೆಯನ್ನು ಜಾಕ್ ಕೊಟ್ಟು ಮೂರಡಿ ಮೇಲೆತ್ತುವ ಕಾರ್ಯ ಸಂಪೂರ್ಣವಾಗಿದೆ. ಇದೀಗ ಮೇಲೆತ್ತಿರುವ ಮನೆಯ ತಳಪಾಯದ ಭಾಗವನ್ನು ಕಬ್ಬಿಣ, ಸಿಮೆಂಟು ಅಳವಡಿಸಿ ಕೆಂಪುಕಲ್ಲುಗಳಿಂದ ಕಟ್ಟುವ ಕಾಮಗಾರಿ ನಡೆಯುತ್ತಿದೆ.

How to lift entire house by jack: ಮೊದಲ ಹಂತದಲ್ಲಿ ಮನೆಯ ಗೋಡೆಯ ಫ್ಲಿಂತ್ ಪಿಲ್ಲರ್ನ ಅಡಿಭಾಗದಲ್ಲಿ 2 ಅಡಿ ಆಳವನ್ನು ಅಗೆಯಲಾಯಿತು. ಅಲ್ಲಿ 7 ಇಂಚು ಬೆಡ್, ಕಬ್ಬಿಣದ ರಾಡ್ ಅಳವಡಿಕೆ ಮಾಡಲಾಯಿತು. ಆ ಬಳಿಕ ಮನೆಯ ಸುತ್ತಲೂ 200ರಷ್ಟು ಜಾಕ್ ಅಳವಡಿಸಲಾಯಿತು. ಈ ಜಾಕ್ ಅನ್ನು ತಿರುಗಿಸಿದಾಗ ಮನೆ ಸೀಳು, ಕ್ರ್ಯಾಕ್ಗಳಾಗದೆ ಎತ್ತರಕ್ಕೆ ಹೋಗುತ್ತದೆ. ಬಳಿಕ ಒಂದೊಂದೇ ಜಾಕ್ಗಳನ್ನು ತೆಗೆದು ತಳಪಾಯಕ್ಕೆ ಕಬ್ಬಿಣ, ಸಿಮೆಂಟು ಅಳವಡಿಸಿ ಕೆಂಪುಕಲ್ಲಿನಿಂದ ಭದ್ರವಾಗಿ ಕಟ್ಟಲಾಗುತ್ತದೆ. ಈ ವೇಳೆ ಗೋಡೆಯ ಸುತ್ತಲೂ ಯಾವುದೇ ಅಡೆತಡೆಗಳಿಲ್ಲದಂತೆ ನೋಡಲಾಗುತ್ತದೆ.
ಮನೆಯನ್ನು ಲಿಫ್ಟ್ ಮಾಡುತ್ತಿರುವ ಸುರೇಶ್ ಉಡುಪರು ಮಾಲೇಮಾರ್ನಲ್ಲಿ ಮನೆಕಟ್ಟಿ ವಾಸಿಸಲು ತೊಡಗಿ ಹತ್ತಿಪ್ಪತ್ತು ವರ್ಷಗಳೇ ಕಳೆದಿವೆಯಂತೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೃತಕ ನೆರೆಯ ತೊಂದರೆ ಇವರನ್ನು ಹೈರಾಣು ಮಾಡಲು ಆರಂಭಿಸಿದೆ. ಅದರಲ್ಲೂ ಸೆಪ್ಟೆಂಬರ್ ನಂತರದ ಮಳೆಯಿಂದ ಕೃತಕ ನೆರೆಯ ತೊಂದರೆ ಕಟ್ಟಿಟ್ಟ ಬುತ್ತಿಯಂತೆ. ಈ ಸಂದರ್ಭ ಮನೆಯೊಳಗೆ ನುಗ್ಗುವ ನೀರಿನಿಂದ ಆಗುವ ಅವಾಂತರ ಅಷ್ಟಿಷ್ಟಲ್ಲ. ಒಳಚರಂಡಿ, ಕೊಳಚೆ ನೀರು ಮನೆಯೊಳಗೆ ನುಗುತ್ತದೆ. ಇದನ್ನು ಸ್ವಚ್ಛಗೊಳಿಸುವುದೇ ನಿತ್ಯ ಕರ್ಮವಾಗುತ್ತದೆ ಎನ್ನುತ್ತಾರೆ.
ಸುರೇಶ್ ಉಡುಪರು ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರಾದವರು. ಅವರ ಪತ್ನಿ ಗೃಹಿಣಿ. ಮಗಳು ಮದುವೆಯಾಗಿ ನಾರ್ವೆಯಲ್ಲಿದ್ದಾರೆ. ಇದೀಗ ಮನೆಯಲ್ಲಿ ಹಿರಿಯ ನಾಗರಿಕರಾದ ಇವರಿಬ್ಬರೇ ಇರೋದು. ಕೃತಕ ನೆರೆನೀರು ಮನೆಯೊಳಗೆ ನುಗ್ಗಿದ ಸಂದರ್ಭ ಎಲ್ಲವನ್ನೂ ಇವರಿಬ್ಬರೇ ಸ್ವಚ್ಛಗೊಳಿಸಬೇಕು. ಈ ಸಂದರ್ಭ ಯಾವುದೇ ಇಲೆಕ್ಟ್ರಿಕ್ ಉಪಕರಣಗಳನ್ನು ಉಪಯೋಗಿಸುವುದು ಅಸಾಧ್ಯ. ಕೆಲವೊಂದು ಬಾರಿ ಬಟ್ಟೆಬರೆಗಳು, ಮಗಳ ಮಾರ್ಕ್ಸ್ ಕಾರ್ಡ್ಗಳು ಹಾಳಾಗಿದ್ದೂ ಇದೆಯಂತೆ. ಈ ಎಲ್ಲಾ ಅವಾಂತರಗಳಿಂದ ಬೇಸತ್ತು ಮನೆ ಲಿಫ್ಟಿಂಗ್ ಕಾರ್ಯ ಮಾಡಲಾಗಿದೆ.
ಮನೆಲಿಫ್ಟ್ ಮಾಡುವಾಗ ಮನೆಗೆ ಯಾವುದೇ ತೊಂದರೆ, ಕ್ರ್ಯಾಕ್ ಆಗುವುದಿಲ್ಲ. ಗೋಡೆಯ ಪೈಯಿಂಟಿಂಗ್ ಕೂಡಾ ಯಾವುದೇ ರೀತಿಯಲ್ಲಿ ಹಾಳಾಗುವುದಿಲ್ಲ. ಅನಾಮತ್ತಾಗಿ ಮನೆಯನ್ನು ಮೇಲೆತ್ತುವ ಸಂದರ್ಭ ಮನೆಯೊಳಗಿನ ಕಪಾಟು, ಬೀರು, ಇನ್ನಿತರ ಸಾಮಗ್ರಿಗಳಿಗೂ ಯಾವುದೇ ತೊಂದರೆಗಳಾಗುತ್ತಿಲ್ಲ. ಈಗಲೂ ಮನೆಯೊಳಗಿನ ಕಪಾಟಿನೊಳಗೆ ಉಪ್ಪಿನಕಾಯಿ ಭರಣಿಗಳಿವೆ. ಫ್ರಿಡ್ಜ್, ವಾಷಿಂಗ್ ಮೆಷಿನ್ಗಳಿವೆ. ಇದಾವುದೂ ಖಂಡಿತಾ ಹಾಳಾಗುವುದಿಲ್ಲ ಎಂದು ಮನೆಯ ಮಾಲೀಕ ಸುರೇಶ್ ಉಡುಪರು ಭರವಸೆಯಿಂದ ಹೇಳುತ್ತಾರೆ.
ಈ ಮನೆಯನ್ನು ಮೇಲೆತ್ತುವ ಕಾರ್ಯವನ್ನು ಉತ್ತರಪ್ರದೇಶ ಮೂಲದ ರಾಹುಲ್ ಚೌಹಾನ್ ಎಂಬುವರ ಹೆಚ್ ಬಿಎಸ್ಎಲ್ ಹೌಸ್ ಲಿಫ್ಟಿಂಗ್ ಸಂಸ್ಥೆ ಮಾಡುತ್ತಿದೆ. ಹರಿಯಾಣ ಮೂಲದ 12 ಕಾರ್ಮಿಕರು ನಾಜೂಕಿನಿಂದ ಹೌಸ್ ಲಿಫ್ಟಿಂಗ್ ಕಾರ್ಯವನ್ನು ಮಾಡುತ್ತಿದ್ದಾರೆ. 1000 ಚದರ್ ಅಡಿ ಮನೆಯನ್ನು ಒಂದು ತಿಂಗಳೊಳಗೆ ಸಂಪೂರ್ಣ ಲಿಫ್ಟ್ ಮಾಡಲಾಗುತ್ತದೆಯಂತೆ. ಒಂದು ಚದರ್ ಅಡಿಗೆ 250 ರೂ. ಶುಲ್ಕ ವಿಧಿಸಲಾಗುತ್ತದೆಯಂತೆ. ಅಲ್ಲದೆ, ಮನೆಗೆ ಯಾವುದೇ ತೊಂದರೆಯಾಗದಂತೆ ಲಿಫ್ಟ್ ಮಾಡಿ ಕೊಡಲಾಗುತ್ತದೆ ಎಂದು ಕರಾರು ಮಾಡಿ ಸಹಿ ಹಾಕಲಾಗುತ್ತದೆ ಎಂದು ಸಂಸ್ಥೆಯ ಮಾಲತಿ ಪ್ರಸಾದ್ ಹೇಳುತ್ತಾರೆ.
ಓದಿ: ಮುಂದಿನ ಸೆಪ್ಟೆಂಬರ್ ಒಳಗೆ ಮೈಸೂರಿನಲ್ಲಿ ವಿಷ್ಣು ಸ್ಮಾರಕ ಪೂರ್ಣ: ಅನಿರುದ್ಧ ವಿಶ್ವಾಸ