ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಲ್ಲಗುಡ್ಡೆ ಎಂಬಲ್ಲಿ ಮನೆಯೊಂದರ ಆವರಣಗೋಡೆ ಕುಸಿದಿದ್ದು, ಅದೃಷ್ಟವಶಾತ್ ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ.
ಸೋಮನಾಥ ಕುಲಾಲ್ ಎಂಬುವವರಿಗೆ ಸೇರಿದ ಈ ಮನೆಯನ್ನು ನವೀನ್ ಎಂಬುವವರಿಗೆ ವಾಸ್ತವ್ಯಕ್ಕಾಗಿ ಬಾಡಿಗೆಗೆ ನೀಡಲಾಗಿತ್ತು. ಅವರು ಪತ್ನಿ ಪವಿತ್ರ ಹಾಗೂ ಮಗಳೊಂದಿಗೆ ಈ ಮನೆಯಲ್ಲಿ ವಾಸವಿದ್ದರು. ಶುಕ್ರವಾರ ತಡರಾತ್ರಿ 12:30ರ ವೇಳೆಗೆ ಮನೆ ಪಕ್ಕದ ತಡೆಗೋಡೆ ಕುಸಿದು ಮನೆಯ ಗೋಡೆಗಳನ್ನು ಸೀಳಿ ಒಳ ಬಂದಿದೆ.
ಮನೆಮಂದಿ ಪಕ್ಕದಲ್ಲೇ ಮಲ್ಲಗಿದ್ದರೂ ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಸಂಪೂರ್ಣ ಹಾನಿಗೀಡಾಗಿದ್ದು, ಗೋಡೆಗಳು ಕುಸಿದು ವಾಲಿ ನಿಂತಿವೆ. ಮನೆಯಲ್ಲಿದ್ದ ಎಲೆಕ್ಟ್ರಾನಿಕ್ಸ್ ವಸ್ತುಗಳು, ಮನೆಯ ಹೊರ ಭಾಗದಲ್ಲಿದ್ದ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ. ಸ್ಥಳಕ್ಕೆ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯ ಗಂಗಾಧರ್ ಪೂಜಾರಿ, ಪ್ರಮುಖರಾದ ರಮನಾಥ ಪೈ ಮೊದಲಾದವರು ಇಂದು ಬೆಳಗ್ಗ ಭೇಟಿ ನೀಡಿ, ಪರಿಶೀಲಿಸಿದ್ದಾರೆ.