ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಕಂಬಳ ಕ್ರೀಡೆ ಜನಪ್ರಿಯ. ಇಲ್ಲಿಗೆ ಕುದುರೆ ಸವಾರಿ ಹೊಸತು. ಆದರೆ, ಮಂಗಳೂರಿನಲ್ಲಿ 6 ವರ್ಷದ ಹಿಂದೆ ಆರಂಭವಾದ ಕುದುರೆ ಸವಾರಿ ತರಬೇತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ 600 ಮಂದಿ ತರಬೇತಿ ಪಡೆದುಕೊಂಡಿದ್ದಾರೆ.
ಮಂಗಳೂರಿನ ಕದ್ರಿ ಪಾರ್ಕ್ ಬಳಿ ಕಳೆದ ಆರು ವರ್ಷದಿಂದ ಹಾರ್ಸ್ ರೈಡಿಂಗ್ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ. ಮೈಸೂರು- ಬೆಂಗಳೂರಿನಲ್ಲಿ ಜನಪ್ರಿಯವಾಗಿರುವ ಕುದುರೆ ಸವಾರಿ ಇದೀಗ ಮಂಗಳೂರಿನಲ್ಲಿ ಜನಪ್ರಿಯವಾಗುತ್ತಿದೆ. ಇಲ್ಲಿ 9 ಕುದುರೆಗಳಿದ್ದು, ಸಮಯ ಹೊಂದಾಣಿಕೆ ಮಾಡಿಕೊಂಡು ತರಬೇತಿ ನೀಡಲಾಗುತ್ತಿದೆ.
ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ತರಬೇತಿ ನೀಡಲಾಗುತ್ತಿದೆ. 6 ವರ್ಷದ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಇಲ್ಲಿ ತರಬೇತಿ ಪಡೆದುಕೊಂಡವರಿದ್ದಾರೆ. 7 ಸಾವಿರ ಪಾವತಿಸಿದರೆ 22 ದಿನಗಳ ಬೇಸಿಕ್ ಕೋರ್ಸ್ ನೀಡಲಾಗುತ್ತದೆ. ಬೇಸಿಕ್ ಕೋರ್ಸ್ನಲ್ಲಿ ಕುದುರೆಯ ಲಗಾಮು ಹಿಡಿದು ಹೋಗಲು ಸಾಧ್ಯವಾಗುತ್ತದೆ.
ಮಂಗಳೂರಿನಲ್ಲಿ ಹಾರ್ಸ್ ರೈಡಿಂಗ್ ಅಕಾಡೆಮಿ ಸ್ಥಾಪಿಸಿದವರು ಅವಿನಂದನ್ ಎಂಬುವರು. ಹಾಸನ ಮೂಲದ ಇವರು ಮಂಗಳೂರಿನ ಜನತೆಗೆ ಕುದುರೆ ಸವಾರಿಯ ಪಾಠ ಹೇಳಿಕೊಡುತ್ತಿದ್ದಾರೆ. ಅಕಾಡೆಮಿಯಲ್ಲಿ ಇರುವ ನುರಿತ ತರಬೇತಿದಾರರು ನೀಡುವ ಟ್ರೈನಿಂಗ್ನಲ್ಲಿ ಕುದುರೆ ಸವಾರಿ ಕಲಿತವರು ವಿವಿಧೆಡೆ ಸಾಧನೆ ಮಾಡುತ್ತಿದ್ದಾರೆ.
ಇದೀಗ ಕುದುರೆ ಸಾಕುವುದು, ಕುದುರೆ ಟ್ರೈನಿಂಗ್ ಪಡೆಯುವುದು ಪ್ರತಿಷ್ಠೆಯ ವಿಷಯವೂ ಆಗಿದೆ. ವೈದ್ಯರು, ಇಂಜಿನಿಯರ್ ವಿದ್ಯಾರ್ಥಿಗಳು ಕುದುರೆ ಸವಾರಿ ಕಲಿಯಲು ಆಕರ್ಷಿತರಾಗುತ್ತಿದ್ದಾರೆ. ಮಂಗಳೂರಿನ ಹಾರ್ಸ್ ಅಕಾಡೆಮಿಯಲ್ಲಿ ಕಲಿತ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ.
ಐದು ದಿನಗಳ ಹಿಂದೆ ಪಾಂಡಿಚೇರಿಯಲ್ಲಿ ಜರುಗಿದ ಶೋ ಜಂಪಿಂಗ್ ವಿಭಾಗದಲ್ಲಿ ಇಲ್ಲಿನ ವಿದ್ಯಾರ್ಥಿನಿ ಶೌರ್ಯ ಮನೋಜ್ ತೃತೀಯ ಸ್ಥಾನ ಪಡೆದಿದ್ದಾರೆ. ಅರ್ಮಾನ್ ಎಂಬುವರು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಮಂಗಳೂರಿಗೆ ತೀರಾ ಅಪರಿಚಿತವಾಗಿರುವ ಕುದುರೆ ಸವಾರಿಯನ್ನು ನಗರದ ಮಧ್ಯಭಾಗದಲ್ಲಿ ಕಲಿಸುವ ಕಾರ್ಯವನ್ನು ಅವಿನಂದನ್ ಮಾಡುತ್ತಿದ್ದು, ಇವರ ಪ್ರಯತ್ನಕ್ಕೆ ಉತ್ತಮ ಸ್ಪಂದನೆಯೂ ಸಿಕ್ಕಿದೆ.
ಇದನ್ನೂ ಓದಿ: ವಿಶ್ವ ಮಹಿಳಾ ದಿನ ವಿಶೇಷ: ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ 16 ಕಿಲೋ ಮೀಟರ್ ಕ್ರಮಿಸುವ ಶಿಕ್ಷಕಿ