ಬೆಳ್ತಂಗಡಿ(ದಕ್ಷಿಣ ಕನ್ನಡ): ಬೆಳ್ತಂಗಡಿ ತಾಲೂಕಿನ ಕೊಕ್ಕಡ ಮತ್ತು ಶಿಶಿಲಕ್ಕೆ ಹೈದರಾಬಾದ್ ಹಾಗೂ ಬೆಂಗಳೂರಿನಿಂದ ಬಂದಿರುವ ಇಬ್ಬರನ್ನ ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ.
ಹೈದ್ರಾಬಾದ್ನಲ್ಲಿ ಗಂಧದ ಎಣ್ಣೆ ತಯಾರಿಸುವ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ ಕೊಕ್ಕಡ ಗ್ರಾಮದ ತೆಂಬೆಬೈಲಿನ 45 ವರ್ಷ ವ್ಯಕ್ತಿ ಏಪ್ರಿಲ್ 16 ರಂದು ಹೈದ್ರಾಬಾದ್ನಿಂದ ತನ್ನ ಮನೆಗೆ ಬಂದಿದ್ದ. ಈತ ಬಂದಿರುವುದನ್ನು ಗಮನಿಸಿದ ಸ್ಥಳೀಯರು, ಗ್ರಾಮ ಪಂಚಾಯತ್ ಕಾರ್ಯಪಡೆಗೆ ಮಾಹಿತಿ ನೀಡಿದ್ದರು. ಇದರನ್ವಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಫ್ಲೈಯಿಂಗ್ ಸ್ಕ್ವಾಡ್‍ನ ಅಧಿಕಾರಿ ಶಿವಪ್ರಸಾದ್, ಧರ್ಮಸ್ಥಳ ಠಾಣೆಯ ಹೆಚ್.ಸಿ. ರವೀಂದ್ರ, ಕೊಕ್ಕಡ ಆರೋಗ್ಯ ಕೇಂದ್ರದ ಕಾರ್ಯಕರ್ತರು ಅವರ ಮನೆಗೆ ಹೋಗಿ ವಿಚಾರಿಸಿದರು. ಬಳಿಕ ಆತನಿಗೆ ಸೀಲ್ ಹಾಕಿ ಹೋಂ ಕ್ವಾರಂಟೈನ್‍ಗೆ ಒಳಪಡಿಸಿದ್ದಾರೆ. ಈತ ಹೈದಾರಾಬಾದ್‍ನಿಂದ ಕೊಕ್ಕಡಕ್ಕೆ ಹೇಗೆ ಬಂದ ಎಂಬ ಬಗ್ಗೆ ವಿಚಾರಿಸಿದರೆ, ಕಂಪನಿಯವರೇ ವಾಹನದಲ್ಲಿ ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದಾನೆ.
ಇನ್ನು, ಬೆಂಗಳೂರಿನ ಕಂಪನಿಯೊಂದರ ಉದ್ಯೋಗದಲ್ಲಿದ್ದ ಸುಮಾರು 40 ವರ್ಷದ ವ್ಯಕ್ತಿಯೊಬ್ಬ ಶಿಶಿಲ ಗ್ರಾಮಕ್ಕೆ ಏಪ್ರಿಲ್ 17ರಂದು ಆಗಮಿಸಿದ್ದಾನೆ. ವಿಷಯ ತಿಳಿದ ಗ್ರಾ.ಪಂ ಕಾರ್ಯಪಡೆ ಅವರ ಮನೆಗೆ ಹೋಗಿ ವಿಚಾರಿಸಿದ ಬಳಿಕ ಹೋಂ ಕ್ವಾರಂಟೈನ್‍ಗೆ ಒಳಪಡಿಸಿದೆ. ಈತ ಬೆಂಗಳೂರಿನಿಂದ ಶಿವಮೊಗ್ಗದ ಸೊರಬಕ್ಕೆ ಬಂದು ಅಲ್ಲಿಂದ ಬೈಕಂಪಾಡಿಗೆ ಲಾರಿಯಲ್ಲಿ ಬಂದಿರುವುದಾಗಿ ತಿಳಿದುಬಂದಿದೆ.