ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಗರಕ್ಕೆ ಭೇಟಿ ನೀಡಿದ್ದಾರೆ. ಈಶ್ವರಮಂಗಲ ಮತ್ತು ಪುತ್ತೂರಿನ ಕಾರ್ಯಕ್ರಮ ಮುಗಿಸಿದ ಬಳಿಕ ಹೆಲಿಕಾಪ್ಟರ್ನಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಚಿವರು 6 ಗಂಟೆ ವೇಳೆಗೆ ಕೆಂಜಾರಿಗೆ ಬಂದರು. ಬಳಿಕ ಕಾರಿನಿಂದ ಇಳಿದು ತೆರೆದ ವಾಹನದ ಮೂಲಕ ತೆರಳಿದರು.
ಈ ವೇಳೆ ಅಮಿತ್ ಶಾ ಅವರನ್ನು ನೋಡಲು ಸಾವಿರಾರು ಕಾರ್ಯಕರ್ತರು ಕೆಂಜಾರಿಗೆ ಆಗಮಿಸಿದ್ದರು. ಶಾ ಸಂಚರಿಸುವ ವೇಳೆ ಜೈಕಾರ ಮುಗಿಲು ಮುಟ್ಟಿತ್ತು. ಇದೇ ವೇಳೆ ಕಲ್ಲಡ್ಕದ ಗೊಂಬೆಗಳು ಗಮನ ಸೆಳೆದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರೊಂದಿಗೆ ಅಮಿತ್ ಶಾ ಬಿಜೆಪಿ ಕೋರ್ ಕಮಿಟಿ ಸಭೆಗೆ ತೆರಳಿದರು. ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೋರ್ ಕಮಿಟಿ ಸಭೆ ನಡೆಸಿದ್ದಾರೆ.
ಆರು ಜಿಲ್ಲೆಗಳ ಬಿಜೆಪಿ ಪ್ರಮುಖರೊಂದಿಗೆ ಕೋರ್ ಕಮಿಟಿ ಸಭೆ ನಡೆಯಿತು. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಕೊಡಗು ಜಿಲ್ಲೆಗಳ ಬಿಜೆಪಿ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ 118 ಆಹ್ವಾನಿತರು ಭಾಗವಹಿಸಿದ್ದರು. ಆರು ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಪ್ರ.ಕಾರ್ಯ ದರ್ಶಿ, ವಿಭಾಗ ಪ್ರಭಾರಿಗಳು ಸಭೆಯಲ್ಲಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವರಾದ ಸುನಿಲ್ ಕುಮಾರ್, ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಪಾಲ್ಗೊಂಡಿದ್ದರು.
ಸಂಚಾರ ಮಾರ್ಗದಲ್ಲಿ ಪರಿಶೀಲನೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಅವರು ಸಾಗುವ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಕೆಂಜಾರು ಶ್ರೀ ದೇವಿ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಬಿಜೆಪಿ ಪಕ್ಷದ ಕೋರ್ ಕಮಿಟಿ ಸಭೆ ಹಿನ್ನೆಲೆಯಲ್ಲಿ ಕೆಂಜಾರು ಸರ್ಕಲ್ ಬಳಿ ಅಮಿತ್ ಶಾ ಸ್ವಾಗತಕ್ಕೆ ಜಿಲ್ಲಾ ಬಿಜೆಪಿಯಿಂದ ಭರದ ಸಿದ್ಧತೆ ನಡೆಸಿತ್ತು. ಐದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು. ಸಚಿವರು ಸಾಗುವ ದಾರಿಯಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಬಂಡೆಕಲ್ಲುಗಳನ್ನು ಸ್ಫೋಟಿಸಿ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ಮಾರ್ಗದಲ್ಲಿ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳದಿಂದ ಸ್ಥಳ ಪರಿಶೀಲನೆ ನಡೆಸಲಾಗಿತ್ತು.
ಇದನ್ನೂ ಓದಿ: ರಾಷ್ಟ್ರ ವಿರೋಧಿಗಳಿಗೆ ಬೆಂಬಲಿಸುವ ಕಾಂಗ್ರೆಸ್ನಿಂದ ಕರ್ನಾಟಕ ರಕ್ಷಣೆ ಅಸಾಧ್ಯ: ಅಮಿತ್ ಶಾ