ಮಂಗಳೂರು: ಕೆಲಸದಿಂದ ವಜಾ ಮಾಡಿರುವ ವಿಚಾರಕ್ಕೆ ಗರಂ ಆಗಿರುವ ಗೃಹರಕ್ಷಕ ದಳದ ಸಿಬ್ಬಂದಿ ನಗರದ ಮೇರಿ ಹಿಲ್ನಲ್ಲಿರುವ ಗೃಹರಕ್ಷಕ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.
ಕೊರೊನಾ ವಾರಿಯರ್ಗಳಾಗಿ ದಿನದ ನಿಗದಿತ ಅವಧಿ ಮೀರಿ ದುಡಿದರೂ ಗೃಹರಕ್ಷಕ ದಳದ ಸಿಬ್ಬಂದಿಗೆ ಇನ್ನೂ ವೇತನ ಸಿಕ್ಕಿಲ್ಲ. ಇದರ ಬೆನ್ನಲ್ಲೇ ಕೆಲಸದಿಂದ ವಜಾ ಮಾಡಿರುವ ಸರ್ಕಾರದ ಆದೇಶದಿಂದ ಗೃಹರಕ್ಷಕ ಸಿಬ್ಬಂದಿ ಅಕ್ಷರಶಃ ಅತಂತ್ರರಾಗಿದ್ದಾರೆ.
ಇತ್ತೀಚೆಗೆ ಹೈಕೋರ್ಟ್ ಆದೇಶದಂತೆ ಗೃಹರಕ್ಷಕ ದಳದ ಸಿಬ್ಬಂದಿ ವೇತನ ಹೆಚ್ಚಳವಾಗಿತ್ತು. ಆದರೆ ರಾಜ್ಯ ಸರ್ಕಾರ ಗೃಹರಕ್ಷಕ ದಳದಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡುವಂತೆ ಆದೇಶ ಮಾಡಿದೆ. ಈ ಆದೇಶದ ವಿರುದ್ಧ ಗೃಹರಕ್ಷಕ ದಳದ ಸಿಬ್ಬಂದಿ ಗರಂ ಆಗಿದ್ದು, ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಗೃಹರಕ್ಷಕ ದಳದ ಸಾವಿರಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಸರ್ಕಾರದ ಆದೇಶದಂತೆ ಎಸ್ಪಿ ವ್ಯಾಪ್ತಿಯಲ್ಲಿ 250 ಸಿಬ್ಬಂದಿ ಪೈಕಿ 80 ಮಂದಿಗೆ ಕೆಲಸ ನೀಡಿ ಉಳಿದವರನ್ನು ವಜಾಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಅದೇ ರೀತಿ ಮಂಗಳೂರು ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ 153 ಸಿಬ್ಬಂದಿ ಪೈಕಿ 100 ಮಂದಿಗೆ ಕೆಲಸ ನೀಡುವ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಗೃಹರಕ್ಷಕ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.