ಮಂಗಳೂರು: ನಂಜನಗೂಡು ದೇವಾಲಯ ತೆರವು ವಿಚಾರದ ಬಗ್ಗೆ ಅಖಿಲ ಭಾರತ ಹಿಂದೂ ಮಹಾಸಭಾವು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರು, ಕ್ರಿಶ್ಚಿಯನ್, ಮುಸ್ಲಿಂ ಮತಗಳ ಗಮನದಲ್ಲಿಟ್ಟುಕೊಂಡು, ಅವರ ಓಲೈಕೆ ಮಾಡಲು ದೇವಸ್ಥಾನಗಳನ್ನು ಕೆಡವಲಾಗಿದೆ. ಬಿಜೆಪಿ ಸರ್ಕಾರಕ್ಕೆ ತಾಕತ್ತು, ಎದೆಗಾರಿಕೆ ಇದ್ದರೆ, ಮಸೀದಿ, ಚರ್ಚ್ಗಳನ್ನು ಒಡೆದು ನೋಡಲಿ. ಅವರು ನಿಮ್ಮನ್ನು ಬಿಡುತ್ತಾರಾ ಎಂದು ಪ್ರಶ್ನಿಸಿದರು.
ದೇವಸ್ಥಾನ ಕೆಡವಿದ ವಿಚಾರಕ್ಕೆ ಅಧಿಕಾರಿಗಳನ್ನು ದೂರಿ ಪ್ರಯೋಜನವಿಲ್ಲ. ರಾಜಕಾರಣಿಗಳು ಹಾಗೂ ಸರ್ಕಾರದ ಸೂಚನೆಯಂತೆ ಕೆಡವಲಾಗಿದೆ. ಇದೊಂದು ಸಣ್ಣ ತಪ್ಪು, ದೇವಸ್ಥಾನ ಕಟ್ಟುತ್ತೇವೆ ಎನ್ನುತ್ತಾರೆ.
ಸರ್ಕಾರದ ದುಡ್ಡಿನಿಂದ ಕಟ್ಟಬೇಡಿ, ಪಕ್ಷದವರ ಆಸ್ತಿ ಮಾರಿ ದೇವಸ್ಥಾನ ಕಟ್ಟಬೇಕು. ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವಾಗ ಪ್ರಾಣ ಪ್ರತಿಷ್ಠೆ ಮಾಡಲಾಗುತ್ತದೆ. ಆದುದರಿಂದ ದೇವಸ್ಥಾನ ಕೆಡವಿದವರ ವಿರುದ್ಧ ಕೊಲೆ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವು ತುಘಲಕ್ ಆಡಳಿತ ನಡೆಸುತ್ತಿದ್ದು, ತಾಲಿಬಾನ್ಗಿಂತಲೂ ಕೀಳುಮಟ್ಟದಲ್ಲಿ ನಡೆದುಕೊಳ್ಳುತ್ತಿದೆ. ನೈತಿಕತೆ ಇಲ್ಲದ ನಾಚಿಕೆಗೇಡಿನ ಸರ್ಕಾರ ಇದಾಗಿದೆ. ಬಿಜೆಪಿಯು ಬೆನ್ನುಮೂಳೆ ಇಲ್ಲದ ಪಕ್ಷ ಎಂದು ಟೀಕಿಸಿದರು.
ಇದನ್ನೂ ಓದಿ: ಮೈಸೂರು ದೇವಾಲಯ ತೆರವು ವಿವಾದ.. ಸರ್ಕಾರಿ ಜಾಗವೆಂದು ನೀಡಿದ್ದ ವರದಿ ಬಹಿರಂಗ