ಬಂಟ್ವಾಳ: ಬಂಟ್ವಾಳದಿಂದ ಪುಂಜಾಲಕಟ್ಟೆ ಕಡೆಗೆ ತೆರಳುವ ಹೆದ್ದಾರಿ ಈಗ ಅಪಾಯವನ್ನು ಆಹ್ವಾನಿಸುತ್ತಿದೆ. ರಸ್ತೆಯಲ್ಲಿನ ಗುಡ್ಡವೊಂದು ಕುಸಿಯುವ ಹಂತದಲ್ಲಿದ್ದು, ಯಾವುದೇ ಕ್ಷಣದಲ್ಲಿ ಅಪಾಯ ಎದುರಾಗಬಹುದಾಗಿದೆ. ಹಗಲು ಹೊತ್ತಲ್ಲೇ ಆತಂಕ ಉಂಟು ಮಾಡುತ್ತಿರುವ ಈ ರಸ್ತೆಯಲ್ಲಿ ರಾತ್ರಿ ಪ್ರಯಾಣ ಮತ್ತೂ ಅಪಾಯಕಾರಿಯಾಗಿದೆ.
ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿರುವ ಸಮಯದಲ್ಲಿ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಪುಂಜಾಲಕಟ್ಟೆಯಿಂದ ಬಿ.ಸಿ.ರೋಡ್ ವರೆಗೆ 19.85 ಕಿ.ಮೀ. ಉದ್ದದ ಹೆದ್ದಾರಿ ಭಾಗದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಪ್ರದೇಶದ ನಾವೂರು ಗ್ರಾಮದ ಬಡಗುಂಡಿ ರಸ್ತೆ ಅಗಲಗೊಳ್ಳುವ ವೇಳೆ ನಿರ್ಮಾಣವಾದ ಸ್ಥಿತಿಯಿಂದ ಸುಮಾರು 50 ಅಡಿ ಎತ್ತರದ ಗುಡ್ಡ, ಇದರ ಮೇಲ್ಭಾಗದ ಬೃಹತ್ ಮರಗಳು ಇಲ್ಲಿ ಅಪಾಯದ ಮುನ್ಸೂಚನೆ ನೀಡುತ್ತಿವೆ.
ಮಂಗಳೂರಿನಿಂದ ಧರ್ಮಸ್ಥಳ ಭಾಗಕ್ಕೆ ತೆರಳುವ ಬಸ್ಸುಗಳು ಸೇರಿದಂತೆ ಸಾವಿರಾರು ವಾಹನಗಳು ರಾತ್ರಿ-ಹಗಲು ಸಂಚರಿಸುತ್ತಿದ್ದು, ಒಂದು ವೇಳೆ ವಾಹನಗಳು ಸಾಗುವ ವೇಳೆ ಗುಡ್ಡ ಕುಸಿತವಾದಲ್ಲಿ ಅಪಾಯ ಗ್ಯಾರಂಟಿ. ಅಪಾಯಕಾರಿ ಗುಡ್ಡ ನಿರ್ಮಾಣವಾಗಿರುವ ಪ್ರದೇಶಗಳು ಖಾಸಗಿ ಜಮೀನುಗಳಾಗಿದ್ದು, ಅದನ್ನು ತೆರವುಗೊಳಿಸಿ ಗುಡ್ಡ ತೆರವು ಮಾಡಬೇಕಾದರೆ ಮತ್ತೆ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಅದಕ್ಕೆ ಹೆಚ್ಚಿನ ಅನುದಾನ ಬೇಕಿದ್ದು, ಈಗ ಹೆದ್ದಾರಿ ಇಲಾಖೆಯು ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಿದೆ. ಅದಕ್ಕೆ ಅನುದಾನ ಮಂಜೂರುಗೊಂಡ ಬಳಿಕವೇ ಗುಡ್ಡಗಳ ತೆರವು ಕಾರ್ಯ ನಡೆಯಬೇಕಿದೆ.
ಪುಂಜಾಲಕಟ್ಟೆ ಹೆದ್ದಾರಿಯಲ್ಲಿ ಅಪಾಯಕಾರಿ ಗುಡ್ಡಗಳಿರುವುದು ನಮ್ಮ ಗಮನಕ್ಕೆ ಬಂದಿದ್ದು, ಶೀಘ್ರದಲ್ಲಿ ಅದನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುವುದು ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಮಂಗಳೂರಿನ ಎಇಇ. ರಸ್ತೆಗೆ ಕುಸಿದಿರುವ ಭಾಗಗಳಲ್ಲಿ ವಾಹನಗಳು ಆ ಕಡೆ ತೆರಳದಂತೆ ಬ್ಯಾರಿಕೇಡ್ ಹಾಕಲಾಗಿದೆ.