ಮಂಗಳೂರು: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ಹೃದಯ ಮಂದಿರದಲ್ಲಿರಿಸಿ ಆರಾಧಿಸುವ ಎಷ್ಟೋ ದೇಶಭಕ್ತರನ್ನು ನಾವು ಕಂಡಿದ್ದೇವೆ. ಆದರೆ, ಇಲ್ಲೊಂದು ದೇಗುಲದಲ್ಲಿ ಸ್ವತಃ ಗಾಂಧಿಯ ಮೂರ್ತಿಗೆ ನಿತ್ಯ ತ್ರಿಕಾಲ ಪೂಜೆ ನೆರವೇರುತ್ತದೆ. ಇಂದು ಗಾಂಧಿಜೀ ಅವರ 151ನೇ ಜನ್ಮದಿನವನ್ನು ವೈಭವದಿಂದ ಆಚರಿಸಲಾಗುತ್ತಿದೆ.
ಮಂಗಳೂರಿನ ಕಂಕನಾಡಿಯಲ್ಲಿರುವ ಶ್ರೀಬ್ರಹ್ಮಬೈದ್ಯರ್ಕಳ ಕ್ಷೇತ್ರದಲ್ಲಿ ಗಾಂಧಿಗೊಂದು ಗುಡಿ ನಿರ್ಮಿಸಿ ಪ್ರತಿದಿನವೂ ಮೂರು ಹೊತ್ತು ಪೂಜೆ ನೆರವೇರಿಸಲಾಗುತ್ತದೆ. ಅಲ್ಲದೇ ಅವರ ಜನ್ಮದಿನವಾದ ಅಕ್ಟೋಬರ್ 2ರಂದು ಮೂರ್ತಿಗೆ ವಿಶೇಷ ಪೂಜೆ ಸೇವೆ ನೆರವೇರಿಸಲಾಗುತ್ತದೆ. ಸುಮಾರು 72 ವರ್ಷಗಳಿಂದ ಗಾಂಧಿಮೂರ್ತಿಗೆ ಈ ಪೂಜೆ ಸೇವೆ ನಿತ್ಯ ನಿರಂತರವಾಗಿ ನಡೆಯುತ್ತಿದೆ.
ಎರಡೂ ಕಾಲುಗಳನ್ನು ಹಿಂದಕ್ಕೆ ಮಡಿಚಿ, ಪುಸ್ತಕ ಓದುತ್ತಾ ಕುಳಿತ ಭಂಗಿಯಲ್ಲಿರುವ ಸುಮಾರು ಮೂರು ಅಡಿಯಷ್ಟು ಎತ್ತರವುಳ್ಳ ಅಮೃತ ಶಿಲೆಯ ಗಾಂಧಿ ಮೂರ್ತಿಯನ್ನು ಅಪ್ಪಟ ಗಾಂಧಿವಾದಿ ನರ್ಸಪ್ಪ ಸಾಲ್ಯಾನ್ ಎಂಬವರ ಮುತುವರ್ಜಿಯಿಂದ ಈ ಕ್ಷೇತ್ರದಲ್ಲಿ ಸ್ಥಾಪನೆಗೊಂಡಿತು. ಗಾಂಧಿಯವರ ಹೋರಾಟ, ಚಿಂತನೆ, ಅಹಿಂಸಾ ತತ್ವದಲ್ಲಿ ನಂಬಿಕೆಯಿರಿಸಿದ್ದ ನರ್ಸಪ್ಪ ಸಾಲ್ಯಾನ್ ಅವರು, ದ.ಕ.ಜಿಲ್ಲೆಯಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕವೂ ಗಾಂಧಿಯ ತತ್ವಾದರ್ಶ ಜನರಲ್ಲಿ ಮೈಗೂಡಬೇಕು ಎಂಬ ಉದ್ದೇಶವಿರಿಸಿಕೊಂಡಿದ್ದ ನರ್ಸಪ್ಪ ಸಾಲ್ಯಾನ್ ಅವರು, ಮಂಗಳೂರಿನ ಕಂಕನಾಡಿಯಲ್ಲಿರುವ ಪ್ರಸಿದ್ಧ ಶ್ರೀ ಬ್ರಹ್ಮಬೈದ್ಯರ್ಕಳ ಗರಡಿ ಕ್ಷೇತ್ರದಲ್ಲಿ ಗಾಂಧಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ನಿತ್ಯವೂ ಅವರನ್ನು ಆರಾಧನೆ ಮಾಡಬೇಕು ಎಂಬ ಚಿಂತನೆ ನಡೆಸಿದರು. ಇದಕ್ಕೆ ಗರಡಿಯ ಅಂದಿನ ಆಡಳಿತ ಮಂಡಳಿಯೂ ಸಮ್ಮತಿಸಿದ ಕಾರಣ 1948ರಲ್ಲಿ ಮತ್ತೊಬ್ಬ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯೊಂದಿಗೆ ಮಹಾತ್ಮ ಗಾಂಧಿಯವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಇಂದಿನವರೆಗೂ ಗಾಂಧಿಗೆ ಹಾಲು, ಹಣ್ಣು ಇರಿಸಿ ನಿತ್ಯ ತ್ರಿಕಾಲ ಪೂಜೆ ನೆರವೇರುವ ಮೂಲಕ ವಿಶೇಷ ಗೌರವ ಸಲ್ಲಿಸಲಾಗುತ್ತದೆ. ನಿತ್ಯವೂ ಇಲ್ಲಿಗೆ ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದು, ದೇಗುಲದ ಪರಿವಾರ ದೇವರುಗಳೊಂದಿಗೆ ಗಾಂಧಿಗೂ ನಮನ ಸಲ್ಲಿಸಿ ಮುಂದೆ ಸಾಗುತ್ತಾರೆ.
ಬ್ರಹ್ಮ ಬೈದ್ಯರ್ಕಳ ಗರಡಿ ಕ್ಷೇತ್ರದ ಆಡಳಿತ ಮೊಕ್ತೇಸರ ದಿವರಾಜ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ 1948 ರಿಂದ ನರ್ಸಪ್ಪ ಸಾಲ್ಯಾನ್ ಅವರ ಮುತುವರ್ಜಿಯಿಂದ ಗಾಂಧಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯವೂ ಮೂರು ಹೊತ್ತು ಪೂಜೆ ಮಾಡುವ ಕಾರ್ಯ ಆರಂಭವಾಯಿತು. ಹಿಂದೆ ಗಾಂಧಿಯವರ ಮೃಣ್ಮಯ ಮೂರ್ತಿ ಇತ್ತು. ಆದರೆ ಆರೇಳು ವರ್ಷದ ಹಿಂದೆ ದೇವಳದ ಬ್ರಹ್ಮಕಲಶೋತ್ಸವವಾದ ಸಂದರ್ಭದಲ್ಲಿ ಅಮೃತಶಿಲೆಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ನಮ್ಮ ಪೂರ್ವಿಕರು ಮಾಡಿರುವ ಕೈಂಕರ್ಯವನ್ನು ಮುಂದುವರಿಸುತ್ತಿದ್ದೇವೆ ಎಂದು ಹೇಳಿದರು.