ಮಂಗಳೂರು: ಸಖಿ ಒನ್ ಸ್ಟಾಪ್ ಸೆಂಟರ್ಗಳು ಮಹಿಳೆಯರಿಗೆ ಆರೋಗ್ಯ, ಕಾನೂನು, ಆಪ್ತ ಸಲಹೆ ಇಂತಹ ಎಲ್ಲ ರೀತಿಯ ಸಹಾಯ ಹಸ್ತವನ್ನು ಒಂದೇ ಸೂರಿನಡಿಯಲ್ಲಿ ನೀಡಲು ಮುಂದಾಗಿದೆ. ಮಹಿಳೆಯರು ತಮಗೆ ತೊಂದರೆ, ಕಿರುಕುಳ ನೀಡಿದಲ್ಲಿ ದೂರು ಸಲ್ಲಿಸಲು ಧೈರ್ಯವಾಗಿ ಮುಂದೆ ಬರಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣದಲ್ಲಿ ಮಾತನಾಡಿದ ಅವರು, ಮಹಿಳೆಯರ ಹಕ್ಕುಗಳ ಬಗ್ಗೆ ಇಲಾಖೆಯ ಅಧಿಕಾರಿಗಳು ಕಾನೂನಿನ ಅರಿವು ಮೂಡಿಸಬೇಕಾಗಿದೆ. ಮಹಿಳೆಯರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಂಗಳೂರು ವಿವಿಯಲ್ಲಿ ಎರಡು ವರ್ಷದ ಹಿಂದಿನ ವಿದ್ಯಾರ್ಥಿನಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಇಂದು ಕುಲಪತಿ ಅವರ ಜತೆ ಮಾತನಾಡಿದ್ದು, ಸಂಬಂಧಪಟ್ಟವರ ಮೇಲೆ ಇಂದೇ ಶೋಕಾಸ್ ನೋಟಿಸ್ ಜಾರಿ ಮಾಡಲು ಆದೇಶಿಸಿದ್ದೇನೆ. ಒಂದು ವಾರದೊಳಗೆ ಅವರು ಈ ಬಗ್ಗೆ ಉತ್ತರ ನೀಡಬೇಕು. ಆ ಬಳಿಕ ವಿವಿ ಅವರ ಮೇಲೆ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಂದಿನ ದಿನಗಳಲ್ಲಿ ಸೂಚನೆ ನೀಡುತ್ತೇವೆ ಎಂದು ಹೇಳಿದರು.
ಯುವ ಸಮೂಹ ಇಂದು ಸೈಬರ್ ಕ್ರೈಮ್ ಹಾಗೂ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಯುವತಿಯರಿಗೆ ಜಾಗೃತಿ ಮೂಡಿಸುವುದಷ್ಟೇ ಅಲ್ಲ ಯುವಕರಿಗೂ ಜಾಗೃತಿ ಅಗತ್ಯ. ಯಾವುದೇ ಮಹಿಳೆ ತೊಂದರೆಗೊಳಗಾದ ಸಂದರ್ಭದಲ್ಲಿ ತಕ್ಷಣ ಅದಕ್ಕೆ ಸಂಬಂಧಪಟ್ಟಂತೆ ನೆರವು, ಪರಿಹಾರ ಒದಗಿಸಿಕೊಡುವಲ್ಲಿ ಇಲಾಖಾ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.