ಉಳ್ಳಾಲ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಐದು ಮನೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿರರುವ ಘಟನೆ ಬೆಳ್ಮಕಾನೆಕೆರೆ ಎಂಬಲ್ಲಿ ನಡೆದಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದು ಈ ಅವಾಂತರಕ್ಕೆ ಕಾರಣ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಕಾನೆಕೆರೆ ನಿವಾಸಿ ಅಬ್ದುಲ್ ರೆಹಮಾನ್, ಅನೀಸ್, ಹಸೈನಾರ್ ಎಂಬುವರ ಮನೆಗಳು ಸೇರಿದಂತೆ ಇತರೆ ಕೆಲ ಮನೆಗಳು ಹಾನಿಗೀಡಾಗಿವೆ. ತಡೆಗೋಡೆ ನಿರ್ಮಾಣವು ಅವೈಜ್ಞಾನಿಕವಾಗಿರುವುದರಿಂದ ಮಳೆ ನೀರು ಮನೆಗಳಿಗೆ ನುಗ್ಗುತ್ತಿವೆ. ಇಷ್ಟಲ್ಲಾ ಅವಾಂತರ ಸಂಭವಿಸಿದರೂ ಸಹ ಅಧಿಕಾರಿಗಳು ಮಾತ್ರ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸರ್ಕಾರದಿಂದ ಕಟ್ಟಲಾದ ತಡೆಗೋಡೆ ಕಳಪೆಯಾಗಿದೆ. ಸ್ಥಳಕ್ಕೆ ಗ್ರಾಮಕರಣಿಕರೂ ಬಂದಿಲ್ಲ. ಲಾಕ್ಡೌನ್ ಬಳಿಕ ಕೆಲಸವಿಲ್ಲದೆ ಕಂಗೆಟ್ಟಿದ್ದೇವೆ. ನಮ್ಮ ಬದುಕು ಬೀದಿಗೆ ಬಂದಿದೆ. ಊಟ ಮಾಡಲು ಗತಿಯಿಲ್ಲದಂತಾಗಿದೆ. ದಿನಗೂಲಿಯಲ್ಲೇ ಜೀವನ ನಡೆಯಬೇಕು. ಆದರೆ ಅದೂ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.