ಬೆಳ್ತಂಗಡಿ(ದಕ್ಷಿಣ ಕನ್ನಡ):ತಾಲೂಕಿನಲ್ಲಿ ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗ್ರಾಮೀಣ ಭಾಗದ ಜನರು ಭಯಭೀತರಾಗಿದ್ದಾರೆ. ಕಳೆದ ವರ್ಷ ಇದೇ ದಿನ ನೆರೆ ಬಂದಿದ್ದು, ಇವತ್ತೂ ಕೂಡ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.
ಕೆಲವೆಡೆ ಮನೆ ಹಾಗೂ ತೋಟಗಳಿಗೆ ನೀರು ನುಗ್ಗಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ. ಹಲವು ಸೇತುವೆಗಳು ಮುಳುಗಡೆ ಭೀತಿಯಲ್ಲಿದ್ದು, ಮಲವಂತಿಗೆ ಗ್ರಾಮದ, ದಿಡುಪೆಯ ಕಲ್ಬೆಟ್ಟು ಎಂಬಲ್ಲಿ ನೇತ್ರಾವತಿ ಕಿನಾರೆಯ ಸೇತುವೆ ಅಪಾಯದಲ್ಲಿದೆ. ಸುಮಾರು 100 ರಿಂದ 150 ಕುಟುಂಬಕ್ಕೂ ಹೆಚ್ಚು ಜನರಿಗೆ ಕೊಲ್ಲಿ ದೇವಸ್ಥಾನದಿಂದ ದಿಡುಪೆಗೆ ಸಂಪರ್ಕ ಕಲ್ಪಿಸುತ್ತಿದ್ದ ಕಲ್ಬೆಟ್ಟು ಎಂಬಲ್ಲಿ ನೇತ್ರಾವತಿ ನದಿಯ ಸೇತುವೆ ಕುಸಿದಿದೆ.
ದಿಡುಪೆಯ ಮಲವಂತಿಗೆ ಹಾಗೂ ಮಿತ್ತಬಾಗಿಲು ಗ್ರಾಮಗಳ ಕೆಲವೊಂದು ಮನೆಗಳ ಸುತ್ತ ಮುತ್ತ ನೇತ್ರಾವತಿ ನೀರು ಹರಿಯುತ್ತಿದ್ದು, ನೀರಿನ ಪ್ರಮಾಣ ಹೆಚ್ಚಾಗುವ ಸಂಭವ ಇರುವುದರಿಂದ ನದಿಯ ಆಸುಪಾಸಿನ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಮಲವಂತಿಗೆ ಮಿತ್ತಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ಭೂಕುಸಿತ ಸಂಭವಿಸುತ್ತಿದ್ದು, ಜನರು ಆತಂಕದಲ್ಲಿದ್ದಾರೆ. ಈ ಪ್ರದೇಶಗಳಲ್ಲಿ ಈಗಾಗಲೇ ರಕ್ಷಣಾ ತಂಡದ ಸಿದ್ದವಾಗಿದ್ದು, ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ.