ಮಂಗಳೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಪ್ರವಾಸಿ ತಾಣವಾದ ಪಿಲಿಕುಳ ಮೃಗಾಲಯಕ್ಕೆ ಭಾರಿ ಪ್ರಮಾಣದ ನೀರು ನುಗ್ಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಕಳೆದ ಕೆಲವು ದಿನಗಳಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.
ಪಿಲಿಕುಳ ಜೈವಿಕ ಉದ್ಯಾನಕ್ಕೆ ನೀರು ನುಗ್ಗಿದ್ದು, ಇಲ್ಲಿಗೆ ತೆರಳುವ ರಸ್ತೆಯೂ ಜಲಾವೃತವಾಗಿದೆ. ಮತ್ತೊಂದೆಡೆ ಉದ್ಯಾನದ ಒಳಭಾಗದಲ್ಲೂ ನೀರು ನುಗ್ಗಿ ಸಂಕಷ್ಟ ಎದುರಾಗಿದೆ. ಕಡವೆಗಳು ಇರುವ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಉದ್ಯಾನದ ಅಲ್ಲಲ್ಲಿ ನೀರು ನುಗ್ಗಿ ಪ್ರಾಣಿಗಳ ವಾಸ್ತವ್ಯಕ್ಕೂ ಕಷ್ಟವಾಗಿದೆ.
ಮಳೆಗಾಲದಲ್ಲಿ ಸಾಧಾರಣವಾಗಿ ನೀರು ಬರುತ್ತದೆಯಾದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ನೀರು ಒಳನುಗ್ಗಿದೆ. ಸದ್ಯ ಪ್ರವಾಸಿಗರಿಗೆ ಪಿಲಿಕುಳ ಮೃಗಾಲಯಕ್ಕೆ ವೀಕ್ಷಣೆಯನ್ನು ನಿರ್ಬಂಧಿಸಲಾಗಿದೆ.