ಬಂಟ್ವಾಳ: ತಾಲೂಕಿನಲ್ಲಿ ಸೋಮವಾರ ದಿನವಿಡೀ ಮಳೆಯಾಗಿದ್ದು, ಹಲವು ಕಡೆ ಮನೆಗಳಿಗೆ ಹಾನಿಯಾಗಿದೆ.
ಇರಾ ಗ್ರಾಮದ ಮೋಂತಿಮಾರು ಪಡ್ಪುನಲ್ಲಿ ಹಮೀದ್ ಅವರ ಮನೆಯ ಬಳಿಯ ತಡೆಗೋಡೆ ರಫೀಕ್ ಅವರ ಮನೆ ಮೇಲೆ ಬಿದ್ದಿದೆ. ಪುದು ಗ್ರಾಮದ ಕುಂಜರ್ಕಳದಲ್ಲಿ ಭಾನುವಾರ ವಿದ್ಯುತ್ ಕಂಬವೊಂದು ಮಳೆಗೆ ಬಿದ್ದಿದೆ. ಸ್ಥಳೀಯರು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರಿಗೆ ಮಾಹಿತಿ ನೀಡಿದ್ದು, ಅವರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ವಿದ್ಯುತ್ ಕಂಬ ಬದಲಿಸಿ ವಿದ್ಯುತ್ ಮರುಸಂಪರ್ಕಕ್ಕೆ ಕ್ರಮಕೊಂಡಿದ್ದಾರೆ.
ಸಜೀಪನಡು ಗ್ರಾಮದ ಗೋಳಿಪಡ್ಪು ಬಳಿ ಐಸಮ್ಮ ಹುಸೈನಾರ್ ಅವರ ಮೇಲ್ಛಾವಣಿಗೆ ಹಾನಿಯಾಗಿದ್ದು, ಸುಮಾರು 30 ಸಾವಿರ ರೂ. ಹಾನಿ ಸಂಭವಿಸಿದೆ. ವಿಟ್ಲ ಕಸ್ಬಾ ಗ್ರಾಮದಲ್ಲಿ ಸತೀಶ್ ಅವರ ಮನೆಯ ಬಳಿಯ ಆವರಣಗೋಡೆ ಕುಸಿದು ಬಿದ್ದಿದೆ. ಸಜೀಪನಡು ಗ್ರಾಮದ ಕರುಣಾಕರ ಅವರ ಮನೆಗೆ ಸುಮಾರು 1 ಲಕ್ಷ ರೂ.ನಷ್ಟ ಸಂಭವಿಸಿರುವ ಕುರಿತು ಅಂದಾಜಿಸಲಾಗಿದೆ.