ಉಳ್ಳಾಲ(ದ.ಕ): ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಕಡಲ ಅಬ್ಬರ ಜಾಸ್ತಿಯಾಗಿದೆ. ಉಳ್ಳಾಲ ಮತ್ತು ಸೋಮೇಶ್ವರ ವ್ಯಾಪ್ತಿಯಲ್ಲಿ ಸಮುದ್ರ ಅಬ್ಬರಗೊಂಡಿದ್ದು, ಸೋಮೇಶ್ವರ ದೇವಸ್ಥಾನದ ಬಳಿ ಭಾಗಶಃ ಹಾನಿಗೊಂಡಿದ್ದ ಮನೆಯೊಂದು ಸಂಪೂರ್ಣ ಸಮುದ್ರಪಾಲಾಗಿದೆ.
ಸೋಮೇಶ್ವರ ದೇವಸ್ಥಾನ ಬಳಿಯ ನಿವಾಸಿ ಮೋಹನ್ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ಸಮುದ್ರಪಾಲಾಗಿದ್ದು, ಕಳೆದ ಬಾರಿ ಕಡಲ್ಕೊರೆತಕ್ಕೆ ಮನೆ ಭಾಗಶಃ ಹಾನಿಯಾಗಿತ್ತು. ಸೋಮೇಶ್ವರ ಉಚ್ಚಿಲದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿ ಪರಿಣಾಮ ಸೋಮೇಶ್ವರ ಕಡಲ ತೀರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು, ಅನೇಕ ತೆಂಗಿನಮರಗಳು ಸೇರಿದಂತೆ ತೀರ ಪ್ರದೇಶಗಳು ಸಮುದ್ರಪಾಲಾಗುತ್ತಿವೆ.

ಉಳ್ಳಾಲದಲ್ಲಿ ಅಲೆಗಳ ಅಬ್ಬರ:
ಉಳ್ಳಾಲದ ಕೈಕೋ, ಕಿಲೇರಿಯಾನಗರ, ಸೀಗ್ರೌಂಡ್ ಬಳಿ ಸಮುದ್ರದ ಅಬ್ಬರ ಹೆಚ್ಚಾಗಿದೆ. ಇಲ್ಲಿ ಶಾಶ್ವತ ಕಾಮಗಾರಿ ಆರಂಭಗೊಂಡಿದ್ದು, ಈ ಪ್ರದೇಶಗಳಲ್ಲಿನ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿವೆ. ಸೋಮೇಶ್ವರ, ಉಚ್ಚಿಲದಲ್ಲಿಯೂ ಕಡಲ್ಕೊರೆತ ಆರಂಭಗೊಂಡಿದ್ದು, ಕಳೆದ ಬಾರಿ ಉಚ್ಚಿಲ ಬೀಚ್ ಎಂಡ್ ಪಾಯಿಂಟ್ ಸಂಪರ್ಕಿಸುವ ರಸ್ತೆ ಕುಸಿದು ಹೋಗಿತ್ತು. ಇಲ್ಲಿ ಶಾಶ್ವತ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದು ಕಡಲ್ಕೊರೆತ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಉಳ್ಳಾಲ ಮತ್ತು ಸೋಮೇಶ್ವರ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ.
ಕಡಲ್ಕೊರೆತ ತಡೆಗಾಗಿ 2010ರಿಂದ ಈವರೆಗೆ ಎಡಿಬಿ ಯೋಜನೆಯಡಿ ಸಮುದ್ರಕ್ಕೆ ಕಲ್ಲು ಹಾಕುವ ಕಾಮಗಾರಿ ನಡೆಯುತ್ತಲೇ ಇದೆ. ಆದರೆ ಪ್ರತಿವರ್ಷ ಹಾಕುವ ಕಲ್ಲುಗಳೇ ಸಮುದ್ರದ ಪಾಲಾಗುತ್ತಿದ್ದರೂ ಕೂಡಾ ಕಳೆದ 10 ವರ್ಷಗಳಿಂದ ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ.

2018ರಿಂದ ಮತ್ತೆ ಉಚ್ಚಿಲ ಕಡಲ ತೀರದಿಂದ ಬಟ್ಟಂಪ್ಪಾಡಿವರೆಗಿನ 2 ಕಿ.ಮೀ. ವ್ಯಾಪ್ತಿಗೆ 26.32 ಕೋಟಿ ರೂ. ವೆಚ್ಚದ 10 ಬರ್ಮ್ಸ್ ಹಾಗೂ ತೀರದುದ್ದಕ್ಕೂ ಕಲ್ಲುಗಳ ತಡೆಗೋಡೆ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕರಾರಿನ ಪ್ರಕಾರ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಕಂಪನಿಗೆ 2020ರ ಆಗಸ್ಟ್ ಒಳಗೆ ಮುಗಿಸಲು ಗಡುವನ್ನೂ ನೀಡಲಾಗಿದೆ. ಆದರೆ ಕಂಪನಿಯು ಕೇವಲ ಕಡಲಿಗೆ ಬರ್ಮ್ಸ್ಗಳನ್ನು ನಿರ್ಮಿಸಿದ್ದು ಹೊರತುಪಡಿಸಿ ಕೆಲವು ಕಡೆಗಳಲ್ಲಿ ಮಾತ್ರ ತೀರಕ್ಕೆ ಬಂಡೆಗಳ ತಡೆಗೋಡೆ ನಿರ್ಮಿಸಿದೆ. ಇದರಿಂದಾಗಿ ತಡೆಗೋಡೆ ಇಲ್ಲದ ಪ್ರದೇಶಗಳ ಮನೆಗಳಿಗೆ ಕಡಲ್ಕೊರೆತದ ಆತಂಕ ಎದುರಾಗಿದೆ.