ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಆರಂಭವಾಗಿರುವ ಧಾರಾಕಾರ ಮಳೆ ಇಂದು ಸಹ ಮುಂದುವರಿದಿದೆ. ಮಳೆ ಹಿನ್ನೆಲೆ, ಹವಾಮಾನ ಇಲಾಖೆ ನಿನ್ನೆಯವರೆಗೆ ರೆಡ್ ಅಲರ್ಟ್ ಘೋಷಿಸಿತ್ತು. ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು ಶಾಲೆ, ಪಿಯು ತರಗತಿಗಳಿಗೆ ರಜೆ ಘೋಷಿಸಲಾಗಿದೆ.
ಮನೆಯೊಳಗೆ ನುಗ್ಗಿದ ನೀರು, ಕಾರ್ಪೊರೇಟರ್ಗೆ ತರಾಟೆ: ನಗರದ ಕೊಟ್ಟಾರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾಗಿತ್ತು. ಕೆಲ ಮನೆಗಳು ಸಂಪೂರ್ಣ ಜಲಾವೃತಗೊಂಡಿದೆ. ಆಕ್ರೋಶಗೊಂಡ ಮನೆ ಮಂದಿ ಸ್ಥಳೀಯ ಕಾರ್ಪೊರೇಟರ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಚರಂಡಿಯಲ್ಲಿ ಹರಿಯಬೇಕಾದ ನೀರು ಮನೆಯೊಳಗೆ ನುಗ್ಗಿ ಮನೆಮಂದಿ ನೀರಿನಲ್ಲಿಯೇ ನಡೆದಾಡುವ ಪರಿಸ್ಥಿತಿ ಎದುರಾಗಿದೆ. ಮಳೆ ಬಂದರೆ ಸಾಕು ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಕಳೆದ ಹತ್ತು ವರ್ಷಗಳಿಂದ ಈ ಸಮಸ್ಯೆ ಎದುರಾಗುತ್ತಿದೆ. ಚರಂಡಿ ನೀರು ಮನೆಯೊಳಗೆ ನುಗ್ಗಿ ನಾವು ಕೆಲಸ ಕಾರ್ಯವನ್ನು ಬಿಟ್ಟು ಮನೆಯಲ್ಲಿ ಉಳಿಯಬೇಕಾದ ದುಸ್ಥಿತಿ ಎದುರಾಗಿದೆ ಎಂದು ಜನರು ಅಸಮಾಧಾನ ತೋಡಿಕೊಂಡಿದ್ದಾರೆ.
ಮಳೆಗೆ ಇಬ್ಬರು ಬಲಿ, ಓರ್ವರಿಗೆ ಪರಿಹಾರ: ಭಾರಿ ಮಳೆಗೆ ಇಬ್ಬರು ಸಾವನ್ನಪ್ಪಿದ್ದು, ಓರ್ವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಮತ್ತೊಬ್ಬರ ಕುಟುಂಬಕ್ಕೆ ಪರಿಹಾರ ವಿತರಣೆಯ ಪ್ರಕ್ರಿಯೆ ನಡೆಯುತ್ತಿದೆ.
ಮಳೆ ನೀರು ತುಂಬಿ ಹರಿಯುತ್ತಿದ್ದ ತಮ್ಮ ಮನೆ ಸಂಪರ್ಕದ ಮೋರಿಯನ್ನು ದಾಟುವ ವೇಳೆ ಆಯತಪ್ಪಿ ಮೋರಿಯೊಳಗೆ ಬಿದ್ದು ಮೃತಪಟ್ಟಿದ್ದ ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ಸುರೇಶ್ ಗಟ್ಟಿ (53) ಅವರ ಕುಟುಂಬಕ್ಕೆ ಜಿಲ್ಲಾಡಳಿತದ ವತಿಯಿಂದ ಜು. 5ರಂದು 5 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ. ಜು. 4ರಂದು ಸಂಜೆ ಸುಮಾರು 7.30ಕ್ಕೆ ಮೋರಿಯೊಳಗೆ ಬಿದ್ದು ಅವರು ಕೊನೆಯುಸಿರೆಳೆದಿದ್ದರು. ಈ ಬಗ್ಗೆ ಉಳ್ಳಾಲ ತಾಲೂಕು ತಹಶೀಲ್ದಾರರು ವರದಿ ಸಲ್ಲಿಸಿದ್ದರು. ಮೃತರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್. ಮಾರ್ಗಸೂಚಿಯನ್ವಯ ಪರಿಹಾರ ವಿತರಿಸಲಾಗಿದೆ.
ಇನ್ನು ಕುಳಾಯಿ ಗ್ರಾಮದ ಸಂತೋಷ್ (34 ) ಎಂಬವವರು ಜು.5ರ ಬುಧವಾರ ಬೆಳಗ್ಗೆ ಬೈಕಂಪಾಡಿಯಲ್ಲಿರುವ ಸೋಲಾರ್ ಕಂಪನಿಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದರು. ಮರ ಬಿದ್ದು ದಾರಿ ಬಂದ್ ಆದ ಕಾರಣ ಕಾಂಪೌಂಡ್ ಹಾರಲು ಯತ್ನಿಸಿದ ವೇಳೆ ಮರದೊಂದಿಗೆ ಬಿದ್ದ ವಿದ್ಯುತ್ ದೀಪದ ತಂತಿ ತಗುಲಿ ಸಾವನ್ನಪ್ಪಿದರು. ಈ ಬಗ್ಗೆ ಮಂಗಳೂರು ತಹಶೀಲ್ದಾರರು ವರದಿ ಸಲ್ಲಿಸಿದ್ದು, ಮೃತರ ವಾರಸುದಾರರಿಗೆ ಮೆಸ್ಕಾಂ ಇಲಾಖಾ ವತಿಯಿಂದ 5 ಲಕ್ಷ ರೂ.ಗಳ ಪರಿಹಾರ ಪಾವತಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ. ಪಿ. ಅವರು ತಿಳಿಸಿದ್ದಾರೆ.
ಅಪಾರ ಹಾನಿ: ದ.ಕ ಜಿಲ್ಲೆಯಲ್ಲಿ ಮಳೆಯಿಂದ 30ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. 200ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಬುಧವಾರ ದಿನವಿಡೀ ಸುರಿದ ಭಾರಿ ಗಾಳಿ ಮಳೆಯಿಂದ ಮರಗಳು ಉರುಳಿ ಬಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ ಅನೇಕ ವಾಹನಗಳು ಜಖಂಗೊಂಡಿವೆ.
ತೀವ್ರಗೊಂಡ ಕಡಲ್ಕೊರೆತ: ಭಾರಿ ಗಾಳಿ ಮಳೆಯಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಅಲೆಗಳ ಅಬ್ಬರದಿಂದ ಕಡಲ್ಕೊರೆತ ತೀವ್ರಗೊಂಡಿದೆ. ಉಳ್ಳಾಲದ ಉಚ್ಚಿಲ, ಬಟಪಾಡಿ ಪ್ರದೇಶದಲ್ಲಿ ತೆಂಗಿನ ಮರಗಳು ಬಿದ್ದಿವೆ. ಕಡಲತೀರ ಪ್ರದೇಶದಲ್ಲಿ ಜನವಸತಿ ಇಲ್ಲದ ಕಡೆ ಇರುವ ಮನೆ, ಬೀಚ್ ರೆಸಾರ್ಟ್ ಗಳು ಕಡಲ್ಕೊರೆತಕ್ಕೆ ಬಲಿಯಾಗುವ ಅಪಾಯದಲ್ಲಿವೆ. ಇಲ್ಲಿ ಕಡಲ ದಂಡೆಗೆ ಹಾಕಲಾಗಿರುವ ಬೃಹತ್ ಕಲ್ಲುಗಳನ್ನು ಮೀರಿ ಅಲೆಗಳು ದಡಕ್ಕಪ್ಪಳಿಸುತ್ತಿದ್ದು, ಜನರು ತೀವ್ರ ಆತಂಕಕ್ಕೀಡಾಗಿದ್ದಾರೆ.
ಇದನ್ನೂ ಓದಿ: ಮಹಾಮಳೆಗೆ ಕರಾವಳಿ ಜನ ಕಂಗಾಲು - ವೃದ್ಧೆ ಸಾವು: ಪೋಸ್ಟ್ ಚೆಂಡಿಯಾದಲ್ಲಿ ಗುಡ್ಡ ಕುಸಿತದ ಆತಂಕ..
ಮಳೆಗೆ ತಲಪಾಡಿ ಖಾಸಗಿ ಶಿಕ್ಷಣ ಸಂಸ್ಥೆಯ ಬೃಹತ್ ಮೇಲ್ಛಾವಣಿ ಕುಸಿದುಬಿದ್ದು, ಹಲವು ವಾಹನಗಳು ಜಖಂ ಆಗಿವೆ. ರಜೆಯಿದ್ದ ಹಿನ್ನೆಲೆ ವಿದ್ಯಾರ್ಥಿಗಳು ಶಾಲೆಗೆ ಬಂದಿರಲಿಲ್ಲ. ಹಾಗಾಗಿ ದುರಂತ ತಪ್ಪಿದೆ.
ದೇವಿನಗರದ ಶಾರದಾ ವಿದ್ಯಾಲಯದ ಕ್ಯಾಂಪಸ್ ಒಳಗಿನ ಆರು ಅಂತಸ್ತಿನ ಶಾಲಾ ಕಟ್ಟಡದ ಮೇಲೆ ಇತ್ತೀಚೆಗೆ ಅಳವಡಿಸಲಾಗಿದ್ದ ಭಾರಿ ಗಾತ್ರದ ಶೀಟ್ ಛಾವಣಿ ಉರುಳಿ ಕೆಳಗೆ ಬಿದ್ದಿದೆ. ಶೀಟ್ ಅಳವಡಿಸಲು ಹಾಕಲಾಗಿದ್ದ ದೊಡ್ಡ ಕಬ್ಬಿಣದ ಸಲಾಕೆಗಳು ಕೆಳಗೆ ಉರುಳಿ ಬಿದ್ದು, ಅನೇಕ ವಾಹನಗಳು ಜಖಂಗೊಂಡಿವೆ. ಜಿಲ್ಲಾಡಳಿತ ಶಾಲಾ, ಕಾಲೇಜುಗಳಿಗೆ ರಜೆ ನೀಡಿದ್ದರಿಂದ ನಿನ್ನೆ ವಿದ್ಯಾರ್ಥಿಗಳು ಶಾಲೆಗೆ ಬಂದಿರಲಿಲ್ಲ. ಹಾಗಾಗಿ ಸಂಭಾವ್ಯ ಅನಾಹುತ ತಪ್ಪಿದೆ.