ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಜಿಲ್ಲಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಜಿಲ್ಲೆಯಲ್ಲಿ ನಿನ್ನೆಯವರೆಗೆ 24 ಗಂಟೆಗಳ ಅವಧಿಯಲ್ಲಿ 66.3 ಮಿ.ಮೀ ಮಳೆಯಾಗಿದೆ. ಒಂದು ಮನೆಗೆ ಸಂಪೂರ್ಣ ಹಾನಿಯಾಗಿದ್ದು, 8 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಭಾರಿ ಮಳೆಗೆ ನೇತ್ರಾವತಿ, ಕುಮಾರಧಾರ, ಫಲ್ಗುಣಿ ನದಿಗಳು ತುಂಬಿ ಹರಿಯುತ್ತಿವೆ.
ಇದನ್ನೂ ಓದಿ: Video: ಗುಜರಾತ್, ತೆಲಂಗಾಣ, ಕರ್ನಾಟಕದಲ್ಲಿ ವರುಣಾರ್ಭಟ, ಜನ ಜೀವನ ಅಸ್ತವ್ಯಸ್ತ!
ಬಂಟ್ವಾಳದಲ್ಲಿ ನೇತ್ರಾವತಿ ನದಿ 5.1 ಮೀಟರ್, ಉಪ್ಪಿನಂಗಡಿಯಲ್ಲಿ 21 ಮೀಟರ್, ಗುಂಡ್ಯ ನದಿ 4.4 ಮೀಟರ್ ತುಂಬಿ ಹರಿಯುತ್ತಿದೆ. ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಜಿಲ್ಲೆಯ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕುಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿರುಸಿನ ಮಳೆ ಮುಂದುವರೆದಿದೆ. ಇನ್ನೂ ಭಾರಿ ಮಳೆಗೆ ಸಮುದ್ರದ ಅಲೆಗಳ ಅಬ್ಬರವು ಹೆಚ್ಚಾಗಿದೆ.
ಜುಲೈ 20ರವರೆಗೆ ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಇರಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.