ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಜನಜೀವನ ತತ್ತರಿಸಿದೆ. ಹಲವೆಡೆ ನೀರು ನುಗ್ಗಿದ್ದು, ಜಿಲ್ಲೆಯಲ್ಲಿ ಒಟ್ಟು 161 ಕುಟುಂಬಗಳ 626 ಮಂದಿಯನ್ನು ರಕ್ಷಿಸಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿದೆ.
ನೇತ್ರಾವತಿ, ಕುಮಾರಧಾರ ನದಿ ತೀರದ ಪ್ರದೇಶದಲ್ಲಿದ್ದ ನೆರೆಪೀಡಿತರನ್ನು ರಕ್ಷಣೆ ಮಾಡಲಾಗಿದೆ. ಬಂಟ್ವಾಳ ಐಬಿ ಹಾಗೂ ಪಾಣೆ ಮಂಗಳೂರಲ್ಲಿ 25 ಕುಟುಂಬಗಳ ಒಟ್ಟು 55 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲಾದಲ್ಲಿ 13 ಕುಟುಂಬಗಳ 50 ಮಂದಿ, ಚಾರ್ಮಾಡಿಯಲ್ಲಿ 75 ಕುಟುಂಬಗಳ 369 ಜನರು ಹಾಗೂ ಮಿತ್ತಬಾಗಿಲು ಕಿಲ್ಲೂರು ಗ್ರಾಮದ 5 ಕುಟುಂಬಗಳ 36 ಮಂದಿ ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ.
ಹಾಗೆಯೇ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪಿಯು ಕಾಲೇಜಿನಲ್ಲಿ 3 ಕುಟುಂಬಗಳ ಒಟ್ಟು 10 ಮಂದಿ ಹಾಗೂ ಪುಳಿತ್ತಡಿ ಪ್ರಾಥಮಿಕ ಶಾಲೆಯಲ್ಲಿ 6 ಕುಟುಂಬಗಳ 44 ಮಂದಿ ಸೇರಿ ಒಟ್ಟು 54 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಸುಳ್ಯ ತಾಲೂಕಿನ ಕೊಲ್ಲಮೊಗರುವಿನಲ್ಲಿ 8 ಕುಟುಂಬಗಳ ಒಟ್ಟು 22 ಜನರಿಗೆ ಆಶ್ರಯ ವ್ಯವಸ್ಥೆ ಕಲ್ಪಿಸಲಾಗಿದೆ.