ಸುಳ್ಯ: ಬುಧವಾರ ಸಂಜೆ ಸುರಿದ ಗುಡುಗು ಸಹಿತ ಭಾರೀ ಗಾಳಿ ಮಳೆಗೆ ಸುಬ್ರಹ್ಮಣ್ಯ- ಪಂಜ ನಡುವಿನ ಬಳ್ಪ ಸಮೀಪದ ಎಣ್ಣೆಮಜಲು ಎಂಬಲ್ಲಿ ಸ್ಕೂಟರ್ ಹಾಗೂ ಕಾರಿನ ಮೇಲೆ ಮರ ಬಿದ್ದು ಕಾರು ಚಾಲಕ ಗಣೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುಳ್ಯ, ಕಡಬ, ನೆಲ್ಯಾಡಿ, ಸುಬ್ರಹ್ಮಣ್ಯ ಪ್ರದೇಶಗಳಲ್ಲಿ ಸಾಯಂಕಾಲ ಸುಮಾರು 6 ಗಂಟೆಯಿಂದ ಸಿಡಿಲು-ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಈ ವೇಳೆ ಬಳ್ಪದ ಎಣ್ಣೆಮಜಲು ಕ್ರಾಸ್ ಬಳಿ ಸುಬ್ರಹ್ಮಣ್ಯ ಕಡೆಗೆ ಸಂಚರಿಸುತ್ತಿದ್ದ ಬಡೆಕ್ಕೋಡಿಯ ಜನಾರ್ದನ ಎಂಬವರ ಕಾರಿನ ಮೇಲೆ ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್ ಮೇಲೆ ಮರವೊಂದು ಉರುಳಿ ಬಿದ್ದಿದೆ. ಇನ್ನೂ ಈ ಸಂದರ್ಭ ಕಾರು ಚಲಾಯಿಸುತ್ತಿದ್ದ ಗಣೇಶ್ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಸ್ಕೂಟರ್ ಸವಾರನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಸುಬ್ರಹ್ಮಣ್ಯ ಪೋಲೀಸರು, ಗೃಹರಕ್ಷಕ, ಅರಣ್ಯ ಇಲಾಖಾ ಸಿಬಂದಿಗಳು, ಮೆಸ್ಕಾಂ ಇಲಾಖಾ ಸಿಬ್ಬಂದಿ ಆಗಮಿಸಿ ಮರಗಳನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ದಾರಿ ಮಾಡುತ್ತಿದ್ದಾರೆ. ಮಳೆಯಿಂದಾಗಿ ಹೆಚ್ಚಿನ ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.