ಮಂಗಳೂರು : ನಾಯಿಗಳ ವಿಚಾರಕ್ಕಾಗಿ ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಕುವಿನಿಂದ ಇರಿದು, ಅವರ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಕೀಗನ್ ಲೂಯಿಸ್ ಮತ್ತು ಐವನ್ ಲೂಯಿಸ್ ಎಂಬುವರ ವಿರುದ್ಧ ನಗರದ ಕ್ರೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ್ಯಸ್ಟನ್ ಆಶಿಶ್ ಗೊನ್ಸಾಲ್ವಿಸ್ ಹಾಗೂ ಅವರ ಪತ್ನಿ ಕ್ಯಾರೊಲಿನ್ ನಿಕಿತಾ ಗೊನ್ಸಾಲ್ವಿಸ್ ಎಂಬುವರು ಜೂನ್ 24ರಂದು ಬೆಳಗ್ಗೆ 11ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಈ ಸಂದರ್ಭ ಆರೋಪಿ ಕೀಗನ್ ಲೂಯಿಸ್ ಎಂಬಾತ ಆ್ಯಸ್ಟನ್ ಆಶಿಶ್ ಗೊನ್ಸಾಲ್ವಿಸ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನಂತೆ. ಅಲ್ಲದೆ ಅವರನ್ನು ದೂಡಿ, ಕಾಲಿನಿಂದ ಒದ್ದು, ಕೈಲಿದ್ದ ಕಬ್ಬಿಣದ ರಾಡಿನಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾನೆ. ಈ ವೇಳೆ ಐವನ್ ಲೂಯಿಸ್ ವ್ಯಕ್ತಿಯ ಕುತ್ತಿಗೆ ಬಳಿ ಚೂರಿಯಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭ ಬಿಡಿಸಲು ಬಂದ ಪತ್ನಿ ಕ್ಯಾರೊಲಿನ್ ನಿಕಿತಾ ಗೊನ್ಸಾಲ್ವಿಸ್‌ರನ್ನು ಕೂಡ ಆರೋಪಿ ಕೀಗನ್ ಲೂಯಿಸ್ ಅಪ್ಪಿ ಹಿಡಿದು ಬಲಗೈಯನ್ನು ತಿರುಗಿಸಿದ್ದಾನೆ. ಐವನ್ ಲೂಯಿಸ್, ಕ್ಯಾರೊಲಿನ್ ನಿಕಿತಾ ಗೊನ್ಸಾಲ್ವಿಸ್ ಅವರನ್ನು ಹಿಡಿದುಕೊಂಡು ಬಲಕೈ ಹೆಬ್ಬೆರಳ್ಳಿನ ಬಳಿ ಚೂರಿಯಿಂದ ಗಾಯ ಮಾಡಿ ಜೀವ ಬೆದರಿಕೆ ಹಾಕಿದ್ದಾನೆಂಬ ಆರೋಪವೂ ಕೇಳಿ ಬಂದಿದೆ. ಈ ಕುರಿತು ದಂಪತಿ ಕ್ರೈ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆ್ಯಸ್ಟನ್ ಆಶಿಶ್ ಗೊನ್ಸಾಲ್ವಿಸ್ ಅವರು ಮನೆಯಲ್ಲಿ ನಾಯಿಗಳನ್ನು ಸಾಕಿದ್ದಾರಂತೆ. ಆ ನಾಯಿಗಳು ಮನೆ ಬಳಿ ಯಾರನ್ನೂ ತಿರುಗಾಡಲು ಬಿಡುವುದಿಲ್ಲ ಎಂದು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.