ಬಂಟ್ವಾಳ: ಕೋವಿಡ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಸಮೀಪ ಸುಳ್ಳಮಲೆಯಲ್ಲಿ ಚೌತಿ ಹಬ್ಬದ ದಿನ ಗುಹೆಯೊಳಗೆ ತೆರಳಿ ತೀರ್ಥಸ್ನಾನ ಮಾಡುವ ಸಂಪ್ರದಾಯವನ್ನು ರದ್ದು ಮಾಡಲಾಗಿದೆ.
ಈ ಹಿನ್ನೆಲೆ ಸಾಂಪ್ರದಾಯಿಕ ಪೂಜಾ ವಿಧಾನಗಳಿಗೆ ಇಂದು ಚಾಲನೆ ನೀಡಲಾಯಿತು. ಸೋಣ ಅಮವಾಸ್ಯೆಯ ದಿನದಿಂದ ಭಾದ್ರಪದ ಶುಕ್ಲ ಚೌತಿ ಹಬ್ಬದ ದಿನದವರೆಗೆ ಮಾಣಿ ಸಮೀಪ ಸುಳ್ಳಮಲೆ ಗುಹಾತೀರ್ಥ ಸ್ನಾನ ಪ್ರತಿ ವರ್ಷವೂ ಇರುತ್ತದೆ. ಊರು, ಪರ ಊರುಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ತೀರ್ಥಸ್ನಾನ ಮಾಡುತ್ತಾರೆ.
ಕೋವಿಡ್ ಸಮಸ್ಯೆ ಇರದೇ ಇದ್ದರೆ, ಬುಧವಾರದಿಂದ ಚೌತಿಯ ದಿನವಾದ ಶನಿವಾರದವರೆಗೆ ಗುಹಾಪ್ರವೇಶ ಇರುತ್ತಿತ್ತು. ಆದರೆ ನಿರ್ಬಂಧ ಇರುವ ಕಾರಣ ಕೇವಲ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆದವು. ಬುಧವಾರ ತೀರ್ಥಸ್ನಾನಕ್ಕೆ ಪೂರ್ವಭಾವಿಯಾಗಿ ಬಿದಿರಿನ ಕೇರ್ಪು (ಏಣಿ) ಇಡುವ ಕಾರ್ಯಕ್ರಮ ನಡೆಯಿತು. ಬುಧವಾರ ಕೇರ್ಪು ಇಟ್ಟು ಅರಸು ಗುಡ್ಡೆಚಾಮುಂಡಿ ಮತ್ತು ಪ್ರಧಾನಿ ಪಂಜುರ್ಲಿ ದೈವಗಳಿಗೆ ತಂಬಿಲ ನೆರವೇರಿಸಲಾಯಿತು. ಈ ವೇಳೆ ದೈವದ ಅರ್ಚಕರಾದ ಪಳನೀರು ಅನಂತ ಭಟ್ ವೆಂಕಟೇಶ್ ಮಯ್ಯ, ಮಾಣಿಗುತ್ತು ಸಚಿನ್ ರೈ, ಮತ್ತು ಗ್ರಾಮಸ್ಥರು ಇದ್ದರು.