ಮಂಗಳೂರು: ವಾಟ್ಸ್ಯಾಪ್ ಸ್ಟೇಟಸ್ಗೆ ಸಂಬಂಧಿಸಿದಂತೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಎಂಬಾತ ತಂಡ ಕಟ್ಟಿಕೊಂಡು ಓರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಪ್ರಕರಣ ದಕ್ಷಿಣ ಕನ್ನಡದ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.
ರಾಜಕೀಯ ವಿಚಾರ ಕುರಿತು ವಾಟ್ಸ್ಯಾಪ್ ಸ್ಟೇಟಸ್ ವಿಚಾರದಲ್ಲಿ ಮಾತುಕತೆಗಾಗಿ 7 ಮಂದಿಯ ತಂಡದೊಂದಿಗೆ ಸುಹೈಲ್ ಕಂದಕ್, ಕಿಲೇರಿಯಾ ನಗರದ ಯುವಕರ ಬಳಿ ತೆರಳಿದ್ದ. ಈ ವೇಳೆ ಎರಡು ತಂಡಗಳ ಮಧ್ಯೆ ವಾಗ್ವಾದ ನಡೆದಿದ್ದು, ಬಳಿಕ ಗುಂಡಿನ ದಾಳಿ ನಡೆಯಿತೆಂದು ತಿಳಿದು ಬಂದಿದೆ. ಇದರ ಪರಿಣಾಮ ಇರ್ಷಾದ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಗುಂಡುಗಳು ಅಲ್ಲಲ್ಲಿ ಬಿದ್ದಿದ್ದು, ರಕ್ತದ ಕಲೆಗಳು ಕಂಡುಬಂದಿವೆ. ಅಲ್ಲದೆ ಒಂದು ಕಾರು ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ನಗರ ಉಪ ಪೊಲೀಸ್ ಆಯುಕ್ತರಾದ ಲಕ್ಷ್ಮೀಗಣೇಶ್, ಎಸಿಪಿ ಕೋದಂಡರಾಮ, ಉಳ್ಳಾಲ ವೃತ್ತನಿರೀಕ್ಷಕ ಗೋಪಿಕೃಷ್ಣ ಹಾಗೂ ಸಿಸಿಬಿ ತಂಡ ಭೇಟಿ ನೀಡಿ ಪರಿಶೀಲನೆ ಬಳಿಕ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
14 ಆರೋಪಿಗಳ ಬಂಧನ:
ಈ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹಾಗೂ ಉಳ್ಳಾಲ ನಿವಾಸಿಗಳಾದ ಮೊಹಮ್ಮದ್ ಅರ್ಷದ್ ನಿಜಾಮುದ್ದೀನ್, ತೌಫಿಕ್ ಶೇಖ್, ಫಹಾದ್, ಅಫ್ವಾನ್, ಮೊಹಮ್ಮದ್ ಮುಜಮ್ಮಿಲ್, ಮುಷ್ತಾಕ್, ಮೊಹಮದ್, ರೈಫಾನ್, ಹರ್ಷದ್, ಮೊಹಮ್ಮದ್ ನಿಜಾಂ, ಅಬ್ದುಲ್ ರಹಮತುಲ್ಲಾ, ಸದ್ದಾಂ ಹುಸೇನ್, ಮೊಹಮ್ಮದ್ ಅಲ್ಮಜ್ ಬಂಧಿತರು.
ಘಟನೆಯಲ್ಲಿ ಸುಹೈಲ್ ಕಂದಕ್ ಅವರು ಗಾಯಗೊಂಡಿದ್ದು, ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.