ಬಂಟ್ವಾಳ: ಅತಂತ್ರವಾಗಿರುವ ವೃತ್ತಿಪರ ಯಕ್ಷಗಾನ ಕಲಾವಿದರಿಗೆ ಸರ್ಕಾರದಿಂದ ಆರ್ಥಿಕ ಸಹಾಯಧನ ನೀಡುವಂತೆ ಒತ್ತಾಯಿಸಿ ಯಕ್ಷಗಾನ ಮೇಳಗಳ ವ್ಯವಸ್ಥಾಪಕರ ನಿಯೋಗ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಈ ವರ್ಷದ ತಿರುಗಾಟವಿಲ್ಲದೆ ಕಲಾವಿದರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಮುಂದಿನ ವರ್ಷದ ತಿರುಗಾಟ ಆರಂಭವಾಗಬೇಕಾದರೆ ನವೆಂಬರ್ರೆಗೆ ಕಾಯಬೇಕಾಗಿದ್ದು, ಆದರೆ ಪರಿಸ್ಥಿತಿ ಹೀಗೆ ಮುಂದುವರಿದರೆ ಅದು ಕೂಡ ಆರಂಭವಾಗುವುದು ಅನುಮಾನ. ಮತ್ತೊಂದೆಡೆ ಆರ್ಥಿಕ ಸಂಕಷ್ಟದಿಂದ ಸಂಘಟಕರು ಮುಂದೆ ಬರುತ್ತಾರೆಯೇ ಎಂಬುದು ಕೂಡ ಈಗಲೇ ಹೇಳುವಂತಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿರುವ ವೃತ್ತಿಪರ ಯಕ್ಷಗಾನ ಕಲಾವಿದರಿಗೆ ಸರ್ಕಾರ ಸಹಾಯಧನ ನೀಡುವುದು ಅನಿವಾರ್ಯ ಎಂದು ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅವರ ನೇತೃತ್ವದಲ್ಲಿ ತೆರಳಿದ ನಿಯೋಗ ಸಚಿವರಿಗೆ ಮನವರಿಕೆ ಮಾಡಿದೆ.
ವೃತ್ತಿಪರ ಕಲಾವಿದರ ಮಾಹಿತಿ ಕೇಳಿದ ಸಚಿವರು ಸರ್ಕಾರದ ಮಟ್ಟದಲ್ಲಿ ಪರಿಹಾರ ದೊರಕಿಸಿ ಕೊಡುವುದಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ದ.ಕ, ಉಡುಪಿ, ಕಾಸರಗೋಡು, ಉತ್ತರಕನ್ನಡ, ಶಿವಮೊಗ್ಗ ಈ ಭಾಗದಲ್ಲಿ ಮಾತ್ರ ವೃತ್ತಿಪರ ಕಲಾವಿದರಿದ್ದು, ಅವರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಒತ್ತಡ ಹೇರುವಂತೆ ಸಂಸದ ನಳಿನ್ ಕುಮಾರ್ ಅವರಿಗೆ ನಿಯೋಗ ಒತ್ತಾಯಿಸಿದೆ.