ಮಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹೆಚ್.ಡಿ.ರೇವಣ್ಣ ಸರ್ಕಾರದ ಖಜಾನೆಯನ್ನು ಲೂಟಿ ಮಾಡಿ ಹೋಗಿದ್ದಾರೆ. ವಿಧಾನಸಭೆಯಲ್ಲಿ ಎಷ್ಟು ಹಣಕ್ಕೆ ಅನುಮೋದನೆ ನೀಡಲಾಗಿದೆಯೋ ಅಷ್ಟನ್ನು ಆರ್ಥಿಕ ಇಲಾಖೆ ಮಂಜೂರು ಮಾಡುತ್ತದೆ. ಆದರೆ ಈ ಇಬ್ಬರು ಅಣ್ಣ-ತಮ್ಮಂದಿರು 20-25ರಷ್ಟು ಹೆಚ್ಚಿನ ಹಣಕ್ಕೆ ಮಂಜೂರಾತಿ ಮಾಡಿಸಿಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಆರೋಪಿಸಿದರು.
ಮಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಹಿತಿ ಪ್ರಕಾರ ಸುಮಾರು 55 ಸಾವಿರ ಕೋಟಿ ರೂ.ಗೆ ಮಂಜೂರಾತಿ ನೀಡಿದ್ದಾರೆ. ಕುಮಾರಸ್ವಾಮಿಯವರು ತಾನು ಕುರ್ಚಿನಲ್ಲಿ ಇರೋದು ಸ್ವಲ್ಪ ದಿನ ಎಂದು ಈ ರಾಜ್ಯದ ಆರ್ಥಿಕ ಸ್ಥಿತಿಯನ್ನು ಅಸ್ತವ್ಯಸ್ತ ಮಾಡಲು ಹೊರಟಿದ್ದರು ಎಂದು ಹೇಳಿದರು.
ಅಣ್ಣ-ತಮ್ಮಂದಿರಿಬ್ಬರೂ ಸೇರಿ ಆರ್ಥಿಕ ಇಲಾಖೆಯ ಯಾವುದೇ ಮಂಜೂರಾತಿ ಇಲ್ಲದಿದ್ದರೂ, ಅಸೆಂಬ್ಲಿ ಮಂಜೂರಾತಿ ಇಲ್ಲದಿದ್ದರೂ, ಮನಸೋ ಇಚ್ಛೆ ಅನುಮೋದನೆ ನೀಡಿದ್ದಕ್ಕೆ, ಕಾಮಗಾರಿ ಆರಂಭಿಸಿರೋದಕ್ಕೆ ಸಾಕ್ಷಿಗಳಿವೆ. ಈ ರೀತಿ ಮಾಡಿದವರು ಈಗ ಆರ್ಥಿಕ ಪರಿಸ್ಥಿತಿ ಬಗ್ಗೆ ಯಡಿಯೂರಪ್ಪನವರ ಬಗ್ಗೆ ಮಾತನಾಡೋದು ಶೋಭೆ ತರುವಂತದ್ದಲ್ಲ. ಕುಮಾರಸ್ವಾಮಿಯವರು 14 ತಿಂಗಳು ಯಾವ ರೀತಿ ಆಡಳಿತ ನಡೆಸಿದರೆಂದು ಇಡೀ ಕರ್ನಾಟಕದ ಜನತೆಗೆ ತಿಳಿದಿದೆ. ಓರ್ವ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ನನ್ನಿಂದ ಆಗೋದಿಲ್ಲ ಎಂದು ಕೈಲಾಗದೆ ಕಣ್ಣೀರು ಹಾಕಿರೋದನ್ನು ಜನತೆ ನೋಡಿದೆ ಎಂದು ಛೇಡಿಸಿದರು.
ಯಡಿಯೂರಪ್ಪನವರಿಗೆ ಅಭಿವೃದ್ಧಿಯ ಮಂತ್ರ ತಿಳಿದಿದೆ. ಸಮಸ್ಯೆಗಳನ್ನು ಯಾವ ರೀತಿ ಪರಿಹಾರ ಮಾಡೋದು ಎಂದು ಗೊತ್ತಿದೆ. ಸಿದ್ದರಾಮಯ್ಯ ದರಿದ್ರ ಸರ್ಕಾರ ಎಂದು ಹೇಳಿದ್ದಾರೆ. ಇವರು ಮಾಡಿರೋ ಕೆಲಸಗಳಿಂದ ಈಗ ದರಿದ್ರ ಬಂದಿರೋದೇ ಹೊರತು ಯಡಿಯೂರಪ್ಪರಿಂದ ಅಲ್ಲ. ಈಗ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಸಿಎಂ ಬಂದ ಬಳಿಕ ತೆರಿಗೆ ಸಾಕಷ್ಟು ಪ್ರಮಾಣದಲ್ಲಿ ಖಜಾನೆ ಸೇರಿದೆ. ಆರ್ಥಿಕ ಇಲಾಖೆ ಯಾವ ರೀತಿಯಲ್ಲಿ ಸೂಚನೆ ನೀಡುತ್ತೋ ಅದೇ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಬಿ.ಜೆ.ಪುಟ್ಟಸ್ವಾಮಿ ಹೇಳಿದರು.