ಮಂಗಳೂರು: ಕೊರೊನಾ ಪ್ರಕರಣ ಹೆಚ್ಚಳವಿರುವ 5 ರಾಜ್ಯಗಳ ಜನರಿಗೆ ಕರ್ನಾಟಕ ಪ್ರವೇಶಿಸಲು ನಿರ್ಬಂಧ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವ ವಿಚಾರ ಸರಿಯಲ್ಲ. ಮುಂಬೈ ಸೇರಿದಂತೆ ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆ ತರುವುದು ಸರ್ಕಾರದ ಜವಾಬ್ದಾರಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
5 ರಾಜ್ಯಗಳ ಜನರಿಗೆ ಕರ್ನಾಟಕ ಪ್ರವೇಶ ನಿಷೇಧ ಮಾಡಿರುವ ಸರ್ಕಾರದ ನಿರ್ಧಾರ ಸರಿಯಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ನಮ್ಮವರು. ಅಲ್ಲದೇ ಬೇರೆ ಬೇರೆ ರಾಜ್ಯಗಳಲ್ಲಿ ಕನ್ನಡಿಗರು ಸಂಕಷ್ಟದಲ್ಲಿದ್ದಾರೆ. ಅವರನ್ನು ಕರೆದುಕೊಂಡು ಬಂದು ಆರೈಕೆ ಮಾಡಬೇಕು. ಬಿಹಾರ, ಛತ್ತೀಸ್ಘಡ ಮೊದಲಾದ ರಾಜ್ಯಗಳು ಕರ್ನಾಟಕದಲ್ಲಿದ್ದ ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗಿವೆ. ಮಹಾರಾಷ್ಟ್ರ, ಗುಜರಾತ್ನಲ್ಲಿರುವ ಕನ್ನಡಿಗರನ್ನು ಕರೆದುಕೊಂಡು ಬರಲು ನಮಗೆ ಯಾಕೆ ಸಾಧ್ಯವಿಲ್ಲ?. ನಾವೇ ಕನ್ನಡಿಗರನ್ನು ರಕ್ಷಣೆ ಮಾಡದಿದ್ದರೆ ಬೇರೆ ಯಾರು ರಕ್ಷಣೆ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ-ಕೇರಳ ಗಡಿಭಾಗ ಬಂದ್ ಮಾಡಿರುವುದರಿಂದ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ತೊಂದರೆಯಾಗಿದೆ. ದಕ್ಷಿಣ ಕನ್ನಡದವರು ಕಾಸರಗೋಡಿನಲ್ಲಿ, ಕಾಸರಗೋಡಿನವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಓಡಾಡಲು ಆಗದೆ ಇರುವುದರಿಂದ ಇವರ ಕೆಲಸ ಹೋದರೆ ಯಾರು ಕೆಲಸ ಕೊಡುತ್ತಾರೆ ಎಂದು ಪ್ರಶ್ನಿಸಿದರು.