ಮಂಗಳೂರು: ಬೆಂಗಳೂರು ಹೊರತಾಗಿ ಬೇರೆ ನಗರಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಸರ್ಕಾರ ಒತ್ತು ನೀಡುತ್ತಿದ್ದು, ನಗರದಲ್ಲಿ ಅದಕ್ಕಾಗಿ ಭೂಮಿ ಒತ್ತುವರಿ ಹಾಗೂ ಎಲ್ಲೆಲ್ಲಿ ಭೂಮಿ ಇದೆಯೋ ಅದನ್ನು ಕೈಗಾರಿಕೆಗಳ ಅಭಿವೃದ್ಧಿಗೆ ನೀಡಲು ತಯಾರಿದ್ದೇವೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಮಾತನಾಡಿದ ಅವರು, ಇನ್ನೂ ಹೆಚ್ಚಿನ ಭೂಮಿ ಅಗತ್ಯವಿದ್ದಲ್ಲಿ ಭೂ ಸ್ವಾಧೀನ ಮಾಡಲು ನಾವು ತಯಾರಿದ್ದೇವೆ. ಈ ಬಗ್ಗೆ ನಮಗೆ ಪ್ರಸ್ತಾಪ ನೀಡಿ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುತ್ತೇವೆ. ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲನೇ ವಾರದಲ್ಲಿ ನಗರದಲ್ಲಿ ಕೈಗಾರಿಕಾ ಸಮ್ಮೇಳನ ಆಯೋಜನೆ ಮಾಡುವ ಯೋಚನೆಯಿದ್ದು, ಸರ್ಕಾರ ಹಾಗೂ ಕೈಗಾರಿಕಾ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಈಗಾಗಲೇ ಹುಬ್ಬಳ್ಳಿಯಲ್ಲಿ ಕೈಗಾರಿಕಾ ಸಮ್ಮೇಳನ ನಡೆಸಿ ಯಶಸ್ವಿಯಾಗಿದ್ದೇವೆ. ನಿನ್ನೆ ಬೆಳಗಾವಿಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ 160 ಕಂಪನಿಗಳು ಭಾಗವಹಿಸಿದ್ದವು. ಅದೇ ರೀತಿ ನಗರದಲ್ಲೂ ಉದ್ಯೋಗ ಮೇಳ ಆಯೋಜನೆ ಮಾಡುವ ಉದ್ದೇಶವಿದ್ದು, ಕಾರ್ನಾಡ್ನಲ್ಲಿ ಐಟಿ (ಎಸ್ಇಝಡ್) ಸ್ಥಾಪನೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆ. ಸುಮಾರು ನಾಲ್ಕು ಸಾವಿರ ಮಂದಿಗೆ ಉದ್ಯೋಗ ದೊರೆಯಲಿದೆ. ಅದಕ್ಕೂ ನಾವು ಅನುಮೋದನೆ ನೀಡುತ್ತೇವೆ. ಇಲ್ಲಿ ಪ್ರವಾಸೋದ್ಯಮಕ್ಕೆ ಬೇಕಾದಷ್ಟು ಅನುಕೂಲತೆ ಇದದು. ಪ್ರವಾಸೋದ್ಯಮದ ಅಭಿವೃದ್ಧಿಗೆ ರೆಸಾರ್ಟ್ ಹಾಗೂ ಹೋಟೆಲ್ಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.