ಸುಳ್ಯ(ದಕ್ಷಿಣಕನ್ನಡ): ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಿದರೆ ಮಾತ್ರ ಸರ್ಕಾರದ ಸೌಲಭ್ಯಗಳು ಸಿಗುವುದಂತೆ. ಆಯಾ ಪ್ರದೇಶಗಳ ಬಿಜೆಪಿ ನಾಯಕರು, ಕಾರ್ಯಕರ್ತರು ಹೇಳಿದರಷ್ಟೇ ಸುಳ್ಯದ ಶಾಸಕ, ಸಚಿವ ಎಸ್. ಅಂಗಾರ ಅವರು ಸಹಿ ಮತ್ತು ಶಿಫಾರಸು ಮಾಡುವರೆಂದು ಹೇಳಿರುವ ಆಡಿಯೋ ಸಂಚಲನ ಮೂಡಿಸಿದೆ.
"ಬಿಜೆಪಿ ಬೆಂಬಲಿಸಿಲ್ಲ ಎಂಬ ಕಾರಣಕ್ಕೆ ಸುಳ್ಯ ತಾಲೂಕಿನ ಅಲೆಟ್ಟಿಯ ವಿಶೇಷ ಚೇತನರೋರ್ವರಿಗೆ ಸರ್ಕಾರಿ ಸೌಲಭ್ಯ ಸಿಕ್ಕಿಲ್ಲ. ಈ ವ್ಯಕ್ತಿಯ ಗಂಗಾಕಲ್ಯಾಣ ಯೋಜನೆಯ ಕಡತವನ್ನು ಸಚಿವ ಅಂಗಾರ ತಿರಸ್ಕರಿಸಿದ್ದಾರೆ" ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುಂದರ್ ಪಾಟಾಜೆ ಆರೋಪಿಸಿದ್ದಾರೆ.
ಅಲೆಟ್ಟಿ ಗ್ರಾಮದ ವಿಶೇಷಚೇತನ ರಾಮಚಂದ್ರ ನಾಯ್ಕ್ ಎಂಬುವವರು ಗಂಗಾಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಕಡತ ಸುಳ್ಯ ಬಿಜೆಪಿ ಕಚೇರಿ ತಲುಪಿದ್ದು, ಶಾಸಕರ ಸಹಿಯ ಬಳಿಕ ಅಂತಿಮ ಅನುಮೋದನೆ ದೊರೆತು ಸೌಲಭ್ಯ ಸಿಗಬೇಕಿತ್ತು. ಆದರೆ ಬಿಜೆಪಿ ಕಚೇರಿಯಲ್ಲಿದ್ದ ಫೈಲ್ಗೆ ಶಾಸಕರು ಸಹಿ ಮಾಡಿಲ್ಲ ಎಂಬ ಕಾರಣಕ್ಕೆ ರಾಮಚಂದ್ರ ನಾಯ್ಕ ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಎಂಬುವವರಿಗೆ ವಿಚಾರ ತಿಳಿಸಿದ್ದರು.
ಇದನ್ನೂ ಓದಿ: 'ಮೊದಲು ಚುನಾವಣೆ ಎದುರಿಸಲಿ, ಬಳಿಕ ಸಿಎಂ ಸ್ಥಾನಕ್ಕೆ ಪೈಪೋಟಿ ಮಾಡಲಿ'
ಸುಂದರ ಪಾಟಾಜೆ ಅವರು ಸುಳ್ಯ ಬಿಜೆಪಿ ಕಚೇರಿಯ ಕಾರ್ಯದರ್ಶಿ ಚಂದ್ರಶೇಖರ ಎಂಬುವವರಿಗೆ ಕರೆ ಮಾಡಿ ಈ ವಿಷಯದ ಬಗ್ಗೆ ಕೇಳಿದ್ದಾರೆ. ಅದಕ್ಕೆ ಚಂದ್ರಶೇಖರ್ ಅವರು ರಾಮಚಂದ್ರ ನಾಯ್ಕ್ ಕಾಂಗ್ರೆಸ್ ಪಕ್ಷದ ವ್ಯಕ್ತಿ. ಅವರಿಗೆ ಯೋಜನೆ ಮಂಜೂರು ಮಾಡಲು ಸಾಧ್ಯವಿಲ್ಲ. ಅವರಿಗೆ ಯೋಜನೆ ಮಂಜೂರು ಮಾಡಿದರೆ ಅಲ್ಲಿನ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡುತ್ತಾರೆ. ಅಲ್ಲಿನ ಬಿಜೆಪಿ ನಾಯಕರು ಹೇಳದೇ ನಾವು ಅಲ್ಲಿ ಯಾವುದೇ ಕೆಲಸ ಮಾಡುವಂತಿಲ್ಲ, ಕಾರ್ಯಕರ್ತರ ವಿರೋಧ ಇದ್ದರೆ ಶಾಸಕ ಅಂಗಾರ ಅವರು ಕೂಡ ಸಹಿ ಮಾಡಲ್ಲ ಎಂದು ಹೇಳಿರುವ ತುಳು ಭಾಷೆಯ ಆಡಿಯೋ ವೈರಲ್ ಆಗಿದೆ.