ಮಂಗಳೂರು (ದ.ಕ): ಇಂದಿನ ಕಂಪ್ಯೂಟರ್, ಮೊಬೈಲ್ ಯುಗದಲ್ಲಿ ಎಲ್ಲರಿಗೂ ಬರೆಯುವುದು ಮರತೇ ಹೋಗಿದೆ. ಕೈಯಲ್ಲಿ ನಾಲ್ಕಕ್ಷರ ಬರೆಯಲು ಹೋದರೂ ಸ್ಫುಟವಾಗಿ ಬರೆಯಲು ತೊಡಕುಗಳನ್ನು ಎದುರಿಸುತ್ತೇವೆ. ಆದರೆ ಇಲ್ಲೊಬ್ಬಳು ಮಂಗಳೂರಿನ ಹುಡುಗಿ ಎರಡೂ ಕೈಗಳಲ್ಲಿ ಬರೆದು ವಿಶ್ವ ದಾಖಲೆ ನಿರ್ಮಿಸಿದ್ದಾಳೆ.
ಹೌದು.. ಮಂಗಳೂರಿನ ಗೋಪಾಡ್ಕರ್ ಹಾಗೂ ಸುಮಾಡ್ಕರ್ ದಂಪತಿಗಳ ಪುತ್ರಿ ಆದಿ ಸ್ವರೂಪ ಒಂದು ನಿಮಿಷಕ್ಕೆ 45 ಪದಗಳನ್ನು ಎರಡೂ ಕೈ ಬಳಸಿ ಬರೆದು ವಿಶ್ವದಾಖಲೆ ನಿರ್ಮಿಸಿದ್ದಾಳೆ. ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಶನ್ ಸಂಸ್ಥೆ ಈಕೆಯ ಯುನಿಡೈರೆಕ್ಷನಲ್ ವಿಭಾಗದ ಶೈಲಿಯಲ್ಲಿ ಬರೆಯುದಕ್ಕೆ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಪುರಸ್ಕಾರ ನೀಡಿದೆ.
ಶಾಲೆಗೆ ಹೋಗದೇ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಆದಿ ಸ್ವರೂಪ ಎರಡೂ ಕೈಗಳಲ್ಲಿ ಯುನಿಡೈರೆಕ್ಷನಲ್, ಒಪೊಸಿಟ್ ಡೈರೆಕ್ಷನ್, ರೈಟ್ ಹ್ಯಾಂಡ್ ಸ್ಪೀಡ್, ಲೆಫ್ಟ್ ಹ್ಯಾಂಡ್ ಸ್ಪೀಡ್, ರಿವರ್ಸ್ ರನ್ನಿಂಗ್, ಮಿರರ್ ಇಮೇಜ್, ಹೆಟೆರೋಟೋಪಿಕ್, ಹೆಟೆರೋ ಲಿಂಗ್ವಿಸ್ಟಿಕ್, ಎಕ್ಸ್ ಚೇಂಜ್, ಡ್ಯಾನ್ಸಿಂಗ್ ಹಾಗೂ ಬ್ಲೈಂಡ್ ಫೋಲ್ಡಿಂಗ್ ಮುಂತಾದ 10 ವಿವಿಧ ಸ್ವರೂಪದಲ್ಲಿ ಬರೆಯುತ್ತಾಳೆ.
ಇದಿಷ್ಟು ಮಾತ್ರವಲ್ಲದೆ ಈಗಾಗಲೇ ಫ್ಯಾಂಟಸಿ ಕಾದಂಬರಿಯೊಂದನ್ನು ರಚಿಸಿರುವ ಆದಿ ಸ್ವರೂಪ ಮತ್ತೊಂದು ಕಾದಂಬರಿಯನ್ನು ಬರೆಯುತ್ತಿದ್ದಾಳೆ. ಹಿಂದೂಸ್ತಾನಿ ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಅದ್ಭುತ ನೆನಪಿನ ಶಕ್ತಿಯ ತ್ರಯೋದಶ ಅವಧಾನ ಮುಂತಾದರಲ್ಲಿಯೂ ಆದಿ ಸ್ವರೂಪ ಹಿಡಿತ ಸಾಧಿಸಿದ್ದಾಳೆ.
ಅಲ್ಲದೆ ಪಠ್ಯದ ಪದ್ಯಗಳಿಗೆ, ಗದ್ಯ ಭಾಗಗಳಿಗೆ ತಾನೇ ರಾಗ ಸಂಯೋಜಿಸಿ ಹಾಡು ಹಾಡುತ್ತಾಳೆ. ಇತರ ವಿದ್ಯಾರ್ಥಿಗಳ ಜೊತೆಗೆ ಈಕೆ ಹಾಡಿರುವ ಪಠ್ಯಗೀತೆಯ ಸಿಡಿಯೊಂದು ಹೊರಬಂದಿದೆ.
ಆದಿ ಸ್ವರೂಪ ತಂದೆ ಗೋಪಾಡ್ಕರ್ ಸ್ವರೂಪ ಅಧ್ಯಯನ ಕೇಂದ್ರ ಎಂಬ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿದ್ದು, ಇಲ್ಲಿ ಮಕ್ಕಳಿಗೆ ಪಾಠದ ಹೊರೆಯಿಲ್ಲ. ಇಲ್ಲಿ ಮಕ್ಕಳ ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಕಲೆಯನ್ನು ಕಲಿಸಿಕೊಡುತ್ತಾರೆ.
ಈ ಬಗ್ಗೆ ಆದಿ ಸ್ವರೂಪ ಮಾತನಾಡಿ, ಎರಡೂ ಕೈಗಳಲ್ಲಿ 10 ವಿವಿಧ ಸ್ವರೂಪಗಳಲ್ಲಿ ನಾನು ಬರೆಯುತ್ತೇನೆ. ನಮಗೆ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಎಡ ಕೈಯಲ್ಲಿ ಮತ್ತು ಬಲ ಕೈಯಲ್ಲಿ ಅಪ್ಪ-ಅಮ್ಮನ ಬಗ್ಗೆ ಬರೆಯಬೇಕಿತ್ತು. ಹಾಗೆ ಬರೆಯುತ್ತಾ ಈ ಬಗ್ಗೆ ಆಸಕ್ತಿ ಉಂಟಾಯಿತು. ಆ ಬಳಿಕ ಎರಡೂ ಕೈಗಳಲ್ಲಿ ಬರೆಯಲು ಪ್ರಯತ್ನಿಸಿದೆ. ಇನ್ನು ಮುಂದೆ ಎರಡೂ ಕೈಗಳಲ್ಲಿ ಬರೆಯುವ ವೇಗವನ್ನು ಹೆಚ್ಚಿಸುವ ಪ್ರಯತ್ನದಲ್ಲಿದ್ದೇನೆ ಎರಡೂ ಕೈಗಳಲ್ಲಿ ಬರೆಯುವುದಲ್ಲದೆ ರೂಬಿಕ್ಯೂಬ್ , ಸ್ಪೀಡ್ ಬಾಕ್ಸ್, ಮಿಮಿಕ್ರಿ ಮುಂತಾದ ಹತ್ತು ವೈವಿಧ್ಯಮಯ ಪ್ರತಿಭೆಗಳಲ್ಲಿ ಗಿನ್ನಿಸ್ ದಾಖಲೆ ಮಾಡಲು ಮುಂದಿನ ವರ್ಷ ಪ್ರಯತ್ನಿಸುತ್ತಿದ್ದೇನೆ ಎಂದರು.
ಆದಿ ಸ್ವರೂಪಳ ತಂದೆ ಗೋಪಾಡ್ಕರ್ ಮಾತನಾಡಿ, ಸ್ವರೂಪ ಅಧ್ಯಯನ ಕೇಂದ್ರದಲ್ಲಿ ವರ್ಷಪೂರ್ತಿ ಒಂದು ದಿನ ಎಡಗೈಯಲ್ಲಿ ಒಂದು ದಿನ ಬಲಗೈಯಲ್ಲಿ ಅಪ್ಪನ-ಅಮ್ಮನ ಬಗ್ಗೆ ಬರೆಯಲು ಹೇಳುತ್ತಿದ್ದೆವು. ಎಡಗೈ ಬಲಗೈಯಲ್ಲಿ ಬರೆಯುವ ವೇಗ ಒಂದು ಕೈಯಲ್ಲಿ ಬರೆಯುವ ವೇಗಕ್ಕಿಂತ ದುಪ್ಪಟ್ಟಾಗಬೇಕು. ಈಗಾಗಲೇ ನಿಮಿಷಕ್ಕೆ 40 ಪದ ಬರೆಯುವ ಅವಳು ಇದೀಗ 50 ಪದಗಳನ್ನು ಬರೆಯುತ್ತಿದ್ದಾಳೆ.
ಮುಂದಿನ ದಿನಗಳಲ್ಲಿ ಆದಿ ಸ್ವರೂಪ 16 ಜನರು ಒಟ್ಟಿಗೆ ಹೇಳುವ ವಿಷಯವನ್ನು ಏಕ ಕಾಲದಲ್ಲಿ ಮಾಡಿ ಮುಗಿಸುವ ಪ್ರಯತ್ನದಲ್ಲಿದ್ದಾಳೆ. ಇಲ್ಲಿ 10 ಪ್ರತಿಭೆಯನ್ನು ಯಾವುದೇ ವಿದ್ಯಾರ್ಥಿಗಳು ಸಾಧಿಸಬಹುದು ಎಂಬುದನ್ನು ಆದಿ ಸ್ವರೂಪ ಮಾಡಿ ತೋರಿಸಿದ್ದಾಳೆ ಎಂದರು