ಸುಬ್ರಹ್ಮಣ್ಯ: ಕುಮಾರ ಪರ್ವತ ಚಾರಣಿಗರಿಗೆ ಗಿರಿಗದ್ದೆ ಭಟ್ಟರು ಎಂದೇ ಪರಿಚಿತರಾಗಿದ್ದ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತ ಗಿರಿಗದ್ದೆ ನಿವಾಸಿ ಮಹಾಲಿಂಗ ಭಟ್ (67) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಕುಮಾರಪರ್ವತದ ದಾರಿಯ ಗಿರಿಗದ್ದೆ ಎಂಬಲ್ಲಿ ಮನೆ ಹೊಂದಿದ್ದ ಮಹಾಲಿಂಗ ಭಟ್ ಅವರು ಚಾರಣಿಗರಿಗೆ ಉಪಚಾರ, ಮಾರ್ಗದರ್ಶನ ನೀಡುವುದು, ಆಹಾರ ಮತ್ತು ಆಶ್ರಯ ನೀಡುವ ಮೂಲಕ ಚಿರಪರಿಚಿತರಾಗಿದ್ದು, ಚಾರಣಿಗರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಕುಮಾರ ಪರ್ವತ ಚಾರಣಕ್ಕೆ ತೆರಳುವ ಹೆಚ್ಚಿನವರು ಇವರನ್ನು ಸಂಪರ್ಕಿಸಿಯೇ ಆಗಮಿಸುತ್ತಿದ್ದರು.
ಸುಮಾರು 13 ಕಿಲೊಮೀಟರ್ ಎತ್ತರದ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಲ್ಲಿ ಇರುವ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತವನ್ನು ಏರುವುದು ಎಂದರೆ ದೊಡ್ಡ ಸಾಹಸ. ಇಲ್ಲಿಗೆ ನವೆಂಬರ್, ಡಿಸೆಂಬರ್, ಜನವರಿ ತಿಂಗಳಲ್ಲಿ ನೂರಾರು ಮಂದಿ ಪ್ರವಾಸಿಗರು ಬರುತ್ತಾರೆ. ಹಾಗೆ ಬಂದವರು ಬೆಟ್ಟವೇರುವಾಗಲೋ, ಇಳಿಯುವಾಗಲೋ ಮಧ್ಯದಲ್ಲಿರುವ ಗಿರಿಗದ್ದೆ ಭಟ್ರ ಮನೆಗೆ ಹೋಗಿಯೇ ಹೋಗುತ್ತಾರೆ. ಪರಮೇಶ್ವರ ಜೋಯಿಸರ ಮಕ್ಕಳು ಗಿರಿಗದ್ದೆ ಭಟ್ ಸಹೋದರರು. ಇವರ ಪೈಕಿ ವೆಂಕಟರಮಣ ಭಟ್ ಅವರು ಪ್ರಸಿದ್ಧ ಪಾಕಪ್ರವೀಣರು. ಹೀಗಾಗಿ, ಅವರು ಬೆಟ್ಟದ ಕೆಳಗೆ ನೆಲೆಸಿದರು. ಮಹಾಲಿಂಗ ಭಟ್, ನಾರಾಯಣ ಭಟ್ಟರು ಬೆಟ್ಟದಲ್ಲಿ ಉಳಿದರು. ಇತ್ತೀಚೆಗೆ( ಮೇ.17ರಂದು ) ವೆಂಕಟರಮಣ ಭಟ್ ಅವರು ನಿಧನ ಹೊಂದಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಿಂದ 13 ಕಿ.ಮೀ.ನಷ್ಟು ಏರುಹಾದಿಯಲ್ಲಿ ಚಾರಣಕ್ಕೆ ಎಂದು ನಡೆಯಬೇಕು. ಕುಮಾರ ಪರ್ವತ ಚಾರಣದ ಬಹುತೇಕ ಅರ್ಧ ದಾರಿ ಸುಮಾರು 5 ಕಿ.ಮೀ. ದೂರ ಸಾಗುವಾಗ ಭಟ್ಟರ ಮನೆ ಸಿಗುತ್ತದೆ. ಹಿಂದಿನ ದಿನ ರಾತ್ರಿ ಅವರ ಮನೆಯಲ್ಲಿ ಉಳಿದುಕೊಂಡು ಬೆಳಗ್ಗೆ ಬೇಗನೆ ಎದ್ದು ಚಾರಣ ಮುಂದುವರಿಸುವವರೂ ಇದ್ದಾರೆ. ಆ ದಿನ ಬೆಟ್ಟದ ತುದಿಗೆ ನೇರವಾಗಿ ಹೋಗಿ, ರಾತ್ರಿ ಅಲ್ಲಿ ಉಳಿದುಕೊಂಡು, ಮರುದಿನ ಕುಕ್ಕೆಗೆ ಹೋಗುವವರು ಇದ್ದಾರೆ.
ರಾತ್ರಿ ವಾಸ್ತವ್ಯಕ್ಕೆ ಟೆಂಟ್ ವ್ಯವಸ್ಥೆ, ಸರಳ ಶೌಚಾಲಯವೂ ಇದೆ. ಶುಚಿರುಚಿಯಾದ ಊಟದ ವ್ಯವಸ್ಥೆಯನ್ನೂ ಭಟ್ಟರು ಮಾಡುತ್ತಾರೆ. ಕಲ್ಲುಮಣ್ಣಿನ ಹಾದಿಯಲ್ಲಿ ಕುಕ್ಕೆಸುಬ್ರಹ್ಮಣ್ಯ ಪೇಟೆಯಿಂದ ಗಿರಿಗದ್ದೆಗೆ ತಲುಪಲು ಸುಮಾರು ಎರಡೂವರೆ ತಾಸು ಬೇಕು. ಮರದ ಬೇರುಗಳು, ಚರಳುಕಲ್ಲು, ಜಾರುವ ಬಂಡೆಗಳು, ನಡಿಗೆಯ ವೇಗವನ್ನು ಕುಗ್ಗಿಸುತ್ತದೆ. ಭಟ್ಟರ ಮನೆಯವರು ಇದನ್ನು ಒಂದೂವರೆ ಗಂಟೆಯಲ್ಲೇ ಕ್ರಮಿಸುತ್ತಾರೆ. ಅಂಗಡಿಗೆ ಭಟ್ಟರ ಮನೆಯವರು ಬರಬೇಕಾದರೆ, ಇಂತಹ ಕಷ್ಟಕರ ಹಾದಿಯಲ್ಲಿ ಬರಬೇಕು. ಚಾರಣಿಗರು ಕುಮಾರ ಪರ್ವತವೇರಲು ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಬರುತ್ತಾರೆ. ಆದರೆ, ಭಟ್ಟರ ಮನೆಯವರು ಸುಮಾರು 10 ಕಿ.ಮೀನಷ್ಟು ನಡೆಯಲೇಬೇಕು. ಅಕ್ಕಿ, ಬೇಳೆ ಇತ್ಯಾದಿಗಳನ್ನು ಹೊತ್ತುಕೊಂಡು ಹೋಗಬೇಕು.
65 ನೇ ವಯಸ್ಸಿನ ಮಹಾಲಿಂಗೇಶ್ವರ ಭಟ್ರ ಜೊತೆಯಲ್ಲಿ ತಮ್ಮನಾದ ಶ್ರೀ ನಾರಾಯಣ ಭಟ್ ಇಲ್ಲಿನ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು, ಸುಮಾರು 35 ಕ್ಕೂ ದೇಸಿ ತಳಿಗಳ ದನ ಸಾಕಾಣೆಯಲ್ಲಿ ತೊಡಗಿದ್ದಾರೆ. ಇಲ್ಲಿ ಸುಮಾರು 5-6 ಜನ ಕೂಲಿ ಕಾರ್ಮಿಕರು ಹೆಚ್ಚಿನ ದಿನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶ್ರೀ ಭಟ್ಟರ ತೋಟಗಾರಿಕಾ ಬೆಳೆಯಾದ ಅಡಕೆ, ತೆಂಗು, ಬಾಳೆ ಮುಂತಾದ ಕೃಷಿ ಕಾರ್ಯಗಳಿಗೆ ಸಹಕರಿಸುತ್ತಾರೆ.
ಗಿರಿಗದ್ದೆಯಲ್ಲಿ ನವರಾತ್ರಿ, ದೀಪಾವಳಿ, ಚೌತಿ ಮುಂತಾದ ಹಬ್ಬಗಳ ಆಚರಣೆಯ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೆ ಇಲ್ಲಿಗೆ ದೆಹಲಿ, ಮುಂಬೈ, ಕಲ್ಕತ್ತಾ, ಬೆಂಗಳೂರು, ಮೈಸೂರು, ಅಮೆರಿಕ, ಕೆನಡಾ, ಜಪಾನ್, ಇಟಲಿ ಮುಂತಾದ ಕಡೆಗಳಿಂದ ಅದ್ಯಯನಕ್ಕಾಗಿ ವಿದ್ಯಾರ್ಥಿಗಳಲ್ಲದೇ ಚಾರಣಿಗರು ಬರುತ್ತಿರುತ್ತಾರೆ. ಇಲ್ಲಿ ಶ್ರೀ ಭಟ್ಟರ ರುಚಿಕರವಾದ ಊಟ-ತಿಂಡಿಗಳ ವ್ಯವಸ್ಥೆಯಿದ್ದು, ಉಳಿದುಕೊಳ್ಳಲು ಟೆಂಟಿನ ಸೌಲಭ್ಯಗಳೂ ಇವೆ.
ಇದನ್ನೂ ಓದಿ : ಕುಮಾರಪರ್ವತದ ಅಕ್ಷಯ ಪಾತ್ರೆ: ಗಿರಿಗದ್ದೆ ಭಟ್ಟರ ಮನೆ ಗೋಡೆ ಮೇಲೆ ಮೂಡಿದ ವರ್ಲಿ ಚಿತ್ರಾಲಂಕಾರ
ಗಿರಿಗದ್ದೆಯ ಶ್ರೀ ಮಹಾಲಿಂಗೇಶ್ವರ ಭಟ್ಟರು ಉತ್ತಮ ವಾಗ್ಮಿ, ಸಹೃದಯಿಯಾಗಿದ್ದು, ಬರುವ ಚಾರಣಿಗರನ್ನು ನಗು ಮುಖ ದಿಂದಲೇ ಸ್ವಾಗತಿಸುತ್ತಾ ಬೇಕಾದವರಿಗೆ ಬೇಕಾದ ಹಾಗೆ ಊಟೋಪಚಾರವ ಮಾಡುತ್ತಿದ್ದರು. ಇವರಿಗೆ 2017 ನೇ ಇಸವಿಯಲ್ಲಿ ಎಜುಕೇಶನ್ ಟ್ರಸ್ಟ್ (ರಿ) ಸುಬ್ರಹ್ಮಣ್ಯದ ವತಿಯಿಂದ 'ಬೆಟ್ಟದ ಜೀವ' ಬಿರುದನ್ನಿತ್ತು ಗೌರವಿಸುದರೊಂದಿಗೆ, ಸುಳ್ಯ, ಪುತ್ತೂರು, ಮುಂತಾದ ಕಡೆಗಳಲ್ಲಿ ಗೌರವಿಸಿ ಸನ್ಮಾನಿಸಲಾಗಿದೆ. ಗಿರಿಗದ್ದೆಯ ಪ್ರದೇಶವು ಕರ್ನಾಟಕ ಅರಣ್ಯ ಇಲಾಖೆಗೆ ಒಳಪಟ್ಟಿದ್ದು, ಇಲ್ಲಿ ಬೇಂಗ, ಮರುವ, ಕಿರಾಲು ಬೋಗಿ, ಬೀಟಿ ಮುಂತಾದ ಮರಗಳಿವೆ. ಹುಲಿ, ಚಿರತೆ, ಕಾಡುಕೋಣ, ಕಾಡಾನೆ ಕಾಡುನಾಯಿ ಮುಂತಾದ ಪ್ರಾಣಿಗಳ ವಾಸ ತಾಣವಾಗಿದೆ. ನಿಸರ್ಗ ರಮಣೀಯ ಪರಿಸರವಾದ ಗಿರಿಗದ್ದೆಯು 'ಅನ್ನ ದೇಗುಲವಿದು ಕೈ ಮುಗಿದು ಒಳಗೆ ಬಾ' ಎಂದು ಸದಾ ಕರೆಯುತ್ತಿದೆ.