ಮಂಗಳೂರು: ವಕೀಲರ ಅವಹೇಳನ ಮಾಡಲಾಗಿದೆ ಎಂದು ಜಿಲ್ಲಾ ವಕೀಲರ ಸಂಘ ತುಳು ಚಿತ್ರ ಗಿರ್ಗಿಟ್ ಪ್ರದರ್ಶನಕ್ಕೆ ನ್ಯಾಯಾಲಯದ ತಡೆಯಾಜ್ಞೆ ತಂದಿದ್ದರೂ ನಗರದ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ ಇಂದು ಕೂಡ ಮುಂದುವರಿದಿದೆ.
ಗಿರ್ಗಿಟ್ ಸಿನಿಮಾದಲ್ಲಿ ವಕೀಲರ ಬಗ್ಗೆ ಅವಹೇಳನ ಮತ್ತು ನ್ಯಾಯಾಂಗ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ವಕೀಲರ ಸಂಘವು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿತ್ತು. ಗುರುವಾರ ಬೆಳಗ್ಗೆಯೇ ಈ ಬಗ್ಗೆ ಆದೇಶ ಬಂದಿತ್ತು. ಆದರೆ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ಇದ್ದರೂ ಮಂಗಳೂರಿನ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ನಡೆಯುತ್ತಿದೆ. ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರಪ್ರದರ್ಶನ ನಡೆಯುತ್ತಿದೆ. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಚಿತ್ರಪ್ರದರ್ಶನ ಮುಂದುವರಿದಿರುವುದು ಅಚ್ಚರಿಗೆ ಕಾರಣವಾಗಿದೆ.
ವಕೀಲರ ಅವಹೇಳನ ಮಾಡಲಾಗಿದೆ ಎಂದು ವಕೀಲರು ತುಳು ಚಿತ್ರ ಗಿರಿಗಿಟ್ ಪ್ರದರ್ಶನಕ್ಕೆ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ವಕೀಲರ ಸಂಘದ ಬಗ್ಗೆ ಅನಾರೋಗ್ಯಕರ ವಾದ, ಅಶ್ಲೀಲ ಮತ್ತು ಅವಾಚ್ಯ ಪದಗಳಿಂದ ಅವಹೇಳನ ಮಾಡಲಾಗಿದೆ ಎಂದು ವಕೀಲರ ಸಂಘ ಪೊಲೀಸರಿಗೆ ದೂರು ನೀಡಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಕೀಲರ ಸಂಘದ ನಿಯೋಗ ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಅವರಿಗೆ ಮನವಿ ಮಾಡಿದೆ. ಅಲ್ಲದೆ, ಮಂಗಳೂರು ಬಂದರು ಪೊಲೀಸ್ ಠಾಣೆಗೆ ಈ ಬಗ್ಗೆ ಲಿಖಿತ ದೂರು ಸಹ ಸಲ್ಲಿಸಿದೆ.
ವಕೀಲರ ಸಂಘದ ಬಗ್ಗೆ ಮತ್ತು ತಡೆಯಾಜ್ಞೆ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿದ್ದ ಪ್ರಧಾನ ಕಾರ್ಯದರ್ಶಿ ಹೆಚ್.ವಿ. ರಾಘವೇಂದ್ರ ಸಹಿತ ಗಣ್ಯರ ಬಗ್ಗೆ ಅವಾಚ್ಯ ಹಾಗೂ ಕೀಳು ಅಭಿರುಚಿಯ ನಿಂದನೆ ಮಾಡಿರುವ ಸ್ಕ್ರೀನ್ ಶಾಟ್‌ಗಳನ್ನು ವಕೀಲರು ಪೊಲೀಸರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.