ಮಂಗಳೂರು: ಅಡಿಕೆ ಮರ ಹತ್ತಲು ಟ್ರೀ ಬೈಕ್ ತಯಾರಿಸಿ ದೇಶಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದ ಕೃಷಿಕ ಗಣಪತಿ ಭಟ್ ಇದೀಗ ತೆಂಗಿನ ಮರ ಹತ್ತಲು ಬೈಕ್ವೊಂದನ್ನು ತಯಾರಿಸಿದ್ದಾರೆ. ತೆಂಗು ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಯಂತ್ರ ಸಿದ್ಧಪಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಮಲೆಯ ಕೃಷಿಕ ಗಣಪತಿ ಭಟ್ ತಮ್ಮ ತೋಟದಲ್ಲಿ ಅಡಿಕೆ, ತೆಂಗು ಕೃಷಿ ಮಾಡುತ್ತಿದ್ದಾರೆ. ಕೆಲಸಕ್ಕೆ ಜನ ಸಿಗದ ಹಿನ್ನೆಲೆಯಲ್ಲಿ ಸುಲಭವಾಗಿ ಅಡಿಕೆ ಮರ ಹತ್ತಿ ಕೊನೆ ತೆಗೆಯಲು ಈ ಹಿಂದೆ ಟ್ರೀ ಬೈಕ್ ತಯಾರಿಸಿ ಖ್ಯಾತಿ ಗಳಿಸಿದ್ದರು. ಇದರ ಯಶಸ್ಸಿನ ಬಳಿಕ ಇದೀಗ ತೆಂಗಿನ ಮರ ಹತ್ತುವ ಯಂತ್ರವನ್ನು ತಯಾರಿಸಿದ್ದಾರೆ.
ಅಡಿಕೆ ಯಂತ್ರದ ರೀತಿಯಲ್ಲೇ ತೆಂಗಿನ ಮರ ಹತ್ತುವ ಯಂತ್ರವನ್ನೂ ಸಿದ್ಧಪಡಿಸಲಾಗಿದೆ. ಅಡಿಕೆ ಮರ ನೇರವಾಗಿದ್ದರೆ, ತೆಂಗಿನ ಮರ ನೇರವಾಗಿರುವುದಿಲ್ಲ, ಬಾಗಿದ ರೀತಿಯಲ್ಲಿ ಇರುವುದರಿಂದ ಅಡಿಕೆ ಮರ ಹತ್ತುವ ಯಂತ್ರಗಳು ಇಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ, ತೆಂಗಿನ ಮರಕ್ಕಾಗಿಯೇ ವಿಶೇಷ ಯಂತ್ರ ತಯಾರಿಸಲಾಗಿದೆ. ಮೇಲೆ ಹೋಗುತ್ತಿದ್ದಂತೆ ಮರ ಬಾಗಿದ ರೀತಿಯಲ್ಲಿದ್ದರೆ ಯಂತ್ರದಲ್ಲಿರುವ ಲಿವರ್ ಮೂಲಕ ಮೇಲೇರಬಹುದು. ಮರದಲ್ಲಿ ಒಂದು ಕಡೆ ಕಾಯಿಯನ್ನು ಕಿತ್ತ ಬಳಿಕ ಮತ್ತೊಂದು ಕಡೆ ಕಾಯಿಯನ್ನು ಕೀಳಲು ಯಂತ್ರವನ್ನು ತಿರುಗಿಸಲು ಅವಕಾಶವಿದೆ.
ಇದನ್ನೂ ಓದಿ: T-20: ಟೀಂ ಇಂಡಿಯಾಗೆ ಟ್ರೀ ಬೈಕ್ ಮೂಲಕ ಅಡಕೆ ಮರವೇರಿ ಶುಭ ಕೋರಿದ ಸಂಶೋಧಕ ಗಣಪತಿ ಭಟ್
ಯಂತ್ರದ ಕುರಿತು ಮಾತನಾಡಿದ ಗಣಪತಿ ಭಟ್, 'ಅಡಿಕೆ ಮರದ ಯಂತ್ರ ತಯಾರಿಸಿದ ಬಳಿಕ ಹಲವು ರೈತರು ತೆಂಗಿನ ಮರ ಹತ್ತುವ ಯಂತ್ರ ತಯಾರಿಸುವಂತೆ ಬೇಡಿಕೆಯನ್ನಿಟ್ಟಿದ್ದರು. ತೆಂಗಿನ ಮರ ಹತ್ತುವಾಗ ಏರು ತಗ್ಗುಗಳಿರುತ್ತದೆ. ಅದಕ್ಕೆ ತಕ್ಕಂತೆ ಈ ಯಂತ್ರ ತಯಾರಿಸಲಾಗಿದೆ. ಒಂದು ಲೀಟರ್ ಪೆಟ್ರೋಲ್ಗೆ ಸುಮಾರು 70 ತೆಂಗಿನ ಮರ ಹತ್ತಲು ಸಾಧ್ಯವಿದೆ. ಈಗಾಗಲೇ ಹಲವು ರೈತರು ಈ ಯಂತ್ರವನ್ನು ಖರೀದಿಸಿದ್ದಾರೆ' ಎಂದರು.
ತೆಂಗಿನ ಮರ ಹತ್ತುವ ಬೈಕ್ ಅಭಿವೃದ್ಧಿಪಡಿಸಿ, ತಯಾರಿಸುತ್ತಿರುವ ನಬೆನ್ಸ್ ಇಂಜಿನಿಯರಿಂಗ್ ಸಲ್ಯೂಷನ್ನ ಶರ್ವಿನ್ ಮೇಬೆನ್ ಎಂಬುವರು ಮಾತನಾಡಿ, 'ತೆಂಗಿನ ಮರದ ಯಂತ್ರ ತಯಾರಿಸುವಾಗ ನಮಗೆ ಸವಾಲಾಗಿದ್ದು ಅದರ ಏರು ತಗ್ಗುಗಳು. ಆರಂಭಿಸುವಾಗ ಇದು ಸುಲಭವೆಂದು ತಿಳಿದುಕೊಂಡಿದ್ದೆವು. ಅದ್ರೆ, ಈ ಯಂತ್ರದ ತಯಾರಿಕೆಗೆ ಹೆಚ್ಚು ಸಮಯ ಬೇಕಾಯಿತು' ಎಂದು ಹೇಳಿದರು.
ಇದನ್ನೂ ಓದಿ: Bantwal.. 'ಪ್ರತಿಷ್ಠಾ ವರ್ಲ್ಡ್ ರೆಕಾರ್ಡ್' ಗೌರವಕ್ಕೆ ಪಾತ್ರರಾದ ಗಣಪತಿ ಭಟ್
ಗಣಪತಿ ಭಟ್ ಮಗಳು ಸುಪ್ರಿಯಾ ಪ್ರತಿಕ್ರಿಯಿಸಿ, 'ತೆಂಗಿನ ಕೃಷಿಕರಿಗೆ ಕೆಲಸಗಾರರ ತೊಂದರೆ ಇದೆ. ಈ ಯಂತ್ರದಿಂದ ಕಾರ್ಮಿಕರ ಕೊರತೆ ಸಮಸ್ಯೆ ನಿವಾರಣೆಯಾಗಲಿದೆ. ಈಗಾಗಲೇ ತೆಂಗು ಕೃಷಿ ಮಾಡುತ್ತಿರುವ ರೈತರಿಂದ ಯಂತ್ರಕ್ಕೆ ಬೇಡಿಕೆ ಬರಲಾರಂಭಿಸಿದೆ' ಎಂದರು. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಆಸಕ್ತರು ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು- 6363271820, 8904272335 (ಶೆರ್ವಿನ್ ಮೆಬೆನ್).