ಮಂಗಳೂರು: ಕಸಪಾ ಈಗಿನ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅವರ ಅಧಿಕಾರವಧಿ ಮುಗಿದಿದ್ದರೂ, ಇನ್ನೂ ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದಾರೆ. ಆದ್ದರಿಂದ ತಕ್ಷಣ ಅವರನ್ನು ಪದಚ್ಯುತಿಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಲಿ ಎಂದು ಗಡಿನಾಡು ಕಾಸರಗೋಡು ಕನ್ನಡ ಹೋರಾಟಗಾರ ಜಿ.ವಿಶ್ವೇಶ್ವರ ಭಟ್ ಕರ್ಮರ್ಕರ್ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಕಸಪಾ ರಾಜ್ಯಾಧ್ಯಕ್ಷರ ಅವಧಿ ಮೂರು ವರ್ಷವಿರೋದನ್ನು ಏಕಾಏಕಿ ಐದು ವರ್ಷಗಳಿಗೆ ಏರಿಸಲಾಗಿದೆ. ಈ ನಡುವೆ ಇದರ ಮೊಕದ್ದಮೆ ಕೋರ್ಟ್ ಮೆಟ್ಟಿಲೇರಿತ್ತು. ಹೀಗಿದ್ದರೂ ಮನು ಬಳಿಗಾರ್ ಅವರೇ ಕಸಪಾ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಿದ್ದಾರೆ. ಇದೀಗ ಐದು ವರ್ಷಗಳು ಕಳೆದರೂ ಅವರ ಪದಚ್ಯುತಿಯಾಗಿಲ್ಲ.ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿಯವರಿಗೂ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ನಂತರ ಮಾತು ಮುಂದುವರೆಸಿ, ಯಾವುದೇ ಸಾಹಿತಿಗಳು ಕನ್ನಡ ಶಾಲೆಗಳಿಗೆ ಅನುದಾನ ಕೊಡಿ ಎಂದು ಕೇಳಿಲ್ಲ.ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕಾದ ಸ್ಥಿತಿಗೆ ಸರ್ಕಾರ ತಂದು ನಿಲ್ಲಿಸಿದೆ. ಇದರ ಜೊತೆಗೆ ಕಾಸರಗೋಡು ಜಿಲ್ಲೆಯ ಕನ್ನಡಿಗರ ಅವಗಣನೆಯಾಗಿದೆ. ಕಾಸರಗೋಡು ಕನ್ನಡಿಗರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು ಎಂದರು.
ಕಾಸರಗೋಡು ಕನ್ನಡ ಚಟುವಟಿಕೆಗಳಿಗೆ ಬೆಂಬಲ ಸಿಗಲಿ. ಕರ್ನಾಟಕದಲ್ಲಿ ಸೇವೆ ಸಲ್ಲಿಸಿ ಅನಿವಾರ್ಯವಾಗಿ ಕೇರಳದ ಕನ್ನಡ ಶಾಲೆಗಳಲ್ಲಿ ಸೇವೆ ಮುಂದುವರಿಸಿ ನಿವೃತ್ತರಾದವರಿಗೆ ಪಿಂಚಣಿ ಜಾರಿ ಮಾಡುವಾಗ ಕರ್ನಾಟಕದಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಬೇಕು. ಕಾಸರಗೋಡಿನ ಕನ್ನಡಿಗರ ಹೃದಯ ಭಾವನಾತ್ಮಕವಾಗಿ ಕರ್ನಾಟಕದೊಂದಿಗೆ ಬೆಸೆದುಕೊಂಡಿದೆ. ಇತ್ತೀಚೆಗೆ ನಡೆದ ಕೊರೊನಾ ಉಭಯರಾಜ್ಯಗಳ ಗಡಿ ನಿರ್ಬಂಧ ಕಾಸರಗೋಡು ಕನ್ನಡಿಗರ ಹೃದಯವನ್ನು ಚೂರು ಚೂರು ಮಾಡಿದೆ. ಇನ್ನಾದರೂ ಇಂತಹ ಘಟನೆಗಳು ಮರುಕಳಿಸದಿರಲಿ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭ ಕಸಪಾ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಲಾ ಅಧ್ಯಾಪಕ ಜಯಪ್ರಕಾಶ್ ಬೇಡ, ಮಧುಸೂದನ್ ಉಪಸ್ಥಿತರಿದ್ದರು.