ಬೆಳ್ತಂಗಡಿ: ಭಾರತದ ಭಾಷೆ ಆಚಾರ-ವಿಚಾರ ಸಂಸ್ಕ್ರತಿ ವಿಶೇಷವಾದದ್ದು, ಅದಕ್ಕೆ ಪೂರಕ ಎಂಬಂತೆ ವಿದೇಶಿ ಪ್ರಜೆಯೊಬ್ಬ ಭಾರತದ ಭಾಷೆಗಳಿಗೆ ಮಾರು ಹೋಗಿದ್ದಾರೆ. ಅದರಲ್ಲೂ ಕನ್ನಡ ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಕಳೆದ 3 ವರ್ಷಗಳಿಂದ ದಕ್ಷಿಣ ಫ್ರಾನ್ಸ್ನ ಬ್ಯಾಪ್ಟಿಸ್ಟ್ ಎನ್ನುವ 26 ವರ್ಷದ ಯುವಕ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎಂಬ ಪ್ರಕೃತಿಯ ತಾಣದಲ್ಲಿ ವಾಸವಾಗಿದ್ದಾರೆ.
ಕನ್ನಡ ಕಲಿಯಬೇಕೆಂಬ ಅದಮ್ಯ ಉತ್ಸಾಹ, ಹಂಬಲದಿಂದ ರಾಜ್ಯಕ್ಕೆ ಬಂದಿದ್ದಾರೆ. ಅವರಿಗೆ ಮೊದಲು ಅಜಿತ್ ಭಿಡೆ ಅವರು ಕನ್ನಡ ಕಲಿಸುತ್ತಿದ್ದರು. ನಂತರದ ದಿನಗಳಲ್ಲಿ ಸಚಿನ್ ಭಿಡೆಯವರು ಕನ್ನಡ ಹಾಗೂ ತುಳು ಭಾಷೆ ಹೇಳಿಕೊಡಲು ನೆರವಾದರು. ಆದರೆ, ಈ ಬಾರಿ ಜನವರಿಯಲ್ಲಿ ಬಂದಿದ್ದು, ಲಾಕ್ಡೌನ್ನಿಂದಾಗಿ ಸ್ವದೇಶಕ್ಕೆ ಹೋಗಲಾಗದೆ ಇಲ್ಲಿಯೇ ಇರುವಂತಾಯಿತು. ಈ ಸಮಯದಲ್ಲಿ ಸುಮ್ಮನೆ ಕುಳಿತುಕೊಳ್ಳದೆ ಸುತ್ತಮುತ್ತಲಿನ ಪರಿಸರದ ಬಗ್ಗೆ ಅಧ್ಯಯನ ಮಾಡಿ ಪ್ರಾಣಿ, ಪಕ್ಷಿಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಕಲೆಹಾಕಿದರು. ಉತ್ತಮವಾದ ಚಿತ್ರಕಾರನಾದ ಈತ, ಹಲವು ಚಿತ್ರಗಳನ್ನು ಕೈಯಲ್ಲಿ ಬಿಡಿಸಿದ್ದಾರೆ. ಅದಲ್ಲದೆ ಉತ್ತಮವಾಗಿ ಡ್ರಂ ಸೆಟ್ ಮ್ಯೂಸಿಕ್ ಸಹ ನುಡಿಸಬಲ್ಲ. ಇವರು ಸ್ಥಳೀಯ ಕೆಲವು ಮಕ್ಕಳಿಗೆ ಡ್ರಂ ಸೆಟ್ ಮ್ಯೂಸಿಕ್ ಕಲಿಸುತ್ತಿದ್ದಾರೆ. ಟ್ರಕ್ಕಿಂಗ್ ಇಷ್ಟಪಡುವ ಈತ ಹಲವು ಬಾರಿ ಟ್ರಕ್ಕಿಂಗ್ ಮಾಡಿದ್ದಾರೆ.
ನಾನು ಭಾರತಕ್ಕೆ ಕೆಲವು ವರ್ಷಗಳಿಂದ ಬರುತಿದ್ದೇನೆ. ನನಗೆ ಭಾರತ ಎಂದರೆ ತುಂಬಾ ಇಷ್ಟ. ಈ ದೇಶದ ಭಾಷೆಗಳನ್ನು ಕಲಿಯಬೇಕೆಂಬ ಹಂಬಲ. ಅದರಲ್ಲೂ ಕನ್ನಡ ಭಾಷೆಯನ್ನು ಕಳೆದ ಮೂರು ವರ್ಷಗಳಿಂದ ಮುಂಡಾಜೆಗೆ ಬಂದಾಗ ಕಲಿಯುತಿದ್ದೇನೆ. ಈಗ ಕನ್ನಡ ಸರಿಯಾಗಿ ಮಾತನಾಡುತ್ತಿದ್ದೇನೆ. ನಾನು ಮುಂಡಾಜೆ ಬಂದಾಗ ನನಗೆ ಎಲ್ಲಾ ರೀತಿಯಲ್ಲೂ ಇಲ್ಲಿಯ ಜನ ಸಹಕಾರ ನೀಡುತಿದ್ದಾರೆ. ತುಂಬ ಆತ್ಮೀಯತೆಯಿಂದ ಪ್ರೀತಿಯಿಂದ ಮಾತನಾಡಿಸುತ್ತಾರೆ. ಸಚ್ಚಿನ್ ಅವರ ಸಹೋದರ ಅಜಿತ್ ಭಿಡೆಯವರು ಕನ್ನಡ ಕಲಿಸೋಕೆ ತುಂಬಾ ಪ್ರಯತ್ನಪಟ್ಟಿದ್ದಾರೆ. ಆದರೆ ಅವರ ಮರಣದ ನಂತರ ಸಚಿನ್ ಭಿಡೆಯವರು ತನ್ನ ಮನೆಯ ಸದಸ್ಯರ ರೀತಿಯಲ್ಲಿ ನೋಡಿಕೊಳ್ಳುತಿದ್ದಾರೆ. ಇಲ್ಲಿಯೂ ನನಗೆ ಕೆಲವು ಜನ ಗೆಳೆಯರಿದ್ದಾರೆ. ಎಲ್ಲರೂ ಪ್ರೀತಿಯಿಂದ ಮಾತನಾಡಿಸುತ್ತಿರುವುದರಿಂದ ನನಗೆ ನನ್ನ ದೇಶದ ನೆನಪೇ ಬರುತ್ತಿಲ್ಲ. ಭಾರತ ಪ್ರಕೃತಿ ರಮಣೀಯ ಪ್ರದೇಶ, ಇಲ್ಲಿಯ ಸಂಸ್ಕ್ರತಿ, ಆಚಾರ, ವಿಚಾರಗಳು ವಿಶೇಷವಾದದ್ದು. ಕನ್ನಡದ ಜೊತೆಗೆ ಸ್ವಲ್ಪ- ಸ್ವಲ್ಪ ತುಳು, ಹಿಂದಿ, ತಮಿಳು ಭಾಷೆಗಳನ್ನೂ ಮಾತನಾಡುತಿದ್ದೇನೆ ಎಂದರು.
ಭಾರತದ ಎಲ್ಲಾ ನನ್ನ ಬಂಧುಗಳಿಗೆ ಒಂದು ವಿನಂತಿ. ದಯವಿಟ್ಟು ಕೊರೊನಾದ ಬಗ್ಗೆ ಜಾಗೃತಿ ವಹಿಸಿ ಸರ್ಕಾರದ ಆದೇಶಗಳನ್ನು ಪಾಲಿಸಿ. ಯಾವುದೇ ಕಾರಣಕ್ಕೂ ಸೂಚನೆಗಳನ್ನು ನಿರ್ಲಕ್ಷಿಸಬಾರದು ಎಂದು ಮನವಿ ಈಟಿವಿ ಭಾರತ ಮೂಲಕ ಮನವಿ ಮಾಡಿದರು.
ಫ್ರಾನ್ಸ್ ದೇಶದಿಂದ ಮಿಶೆಲ್ ಎಂಬವರು ಕಳೆದ ಹಲವು ವರ್ಷಗಳಿಂದ ಭಾರತಕ್ಕೆ ಬಂದಾಗ ನಮ್ಮ ಮನೆ ಮುಂಡಾಜೆ ಆಗಮಿಸುತ್ತಿದ್ದರು. ಕಳೆದ 3 ವರ್ಷಗಳಿಂದ ಇವರೂ ಕೂಡ ಬರುತ್ತಿದ್ದು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ನೋಡಿ ಸಂತೋಷದಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಅದರಲ್ಲೂ ಕನ್ನಡ ಭಾಷೆ ಕಲಿಸಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನನ್ನ ಅಣ್ಣ ಅಜಿತ್ ಭಿಡೆ ಭಾಷೆ ಕಲಿಸಲು ಪ್ರಾರಂಭಿಸಿದರು. ಆದ್ದರಿಂದ ವರ್ಷಕ್ಕೊಮ್ಮೆ ಬರುವಾಗ ಭಾಷೆಯನ್ನು ಶ್ರದ್ಧೆಯಿಂದ ಕಲಿಯುತ್ತಿದ್ದರು. ಆದರೆ ಕೆಲವು ಸಮಯಗಳ ಹಿಂದೆ ಅಣ್ಣ ತೀರಿಕೊಂಡ ನಂತರ ನಾನು ಇವರಿಗೆ ಕನ್ನಡ ಕಲಿಸುತ್ತಿದ್ದೇನೆ. ತುಳು ಕೂಡ ಕಲಿಯುತ್ತಿದ್ದಾರೆ. ಪರಿಸರದ ಬಗ್ಗೆ ಅತಿಯಾದ ಆಸಕ್ತಿ ಹೊಂದಿದ ಇವರು ಸಹ್ಯಾದ್ರಿ ಸಂಚಯನ ತಂಡದ ಮೂಲಕ ಟ್ರಕ್ಕಿಂಗ್ ಹೋಗುವುದು ಪರಿಸರದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಫ್ರಾನ್ಸ್ ದೇಶದ ಒಬ್ಬ ಪ್ರಜೆ ನಮ್ಮ ಭಾಷೆ, ನಮ್ಮ ಪ್ರಕೃತಿಯನ್ನು ಹಾಗೂ ಭಾರತದ ಸಂಸ್ಕ್ರತಿಯನ್ನು ಇಷ್ಟಪಡುತ್ತಿದ್ದಾರೆ. ಇದು ನಮಗೆ ತುಂಬಾ ಹೆಮ್ಮೆಯ ವಿಚಾರ. ನಮ್ಮವರಿಗೆ ಕನ್ನಡ ಬೇಡ, ಇಂಗ್ಲಿಷ್ ಬೇಕು. ನಮ್ಮ ಪ್ರಕೃತಿಯ ಸೊಬಗು ಬೇಡ, ನಮ್ಮ ಆಚಾರ- ವಿಚಾರಗಳೂ ಯಾವುದೂ ಬೇಡ. ಸಿಟಿಯಲ್ಲಿನ ಯುವ ಸಮುದಾಯಕ್ಕೆ ಇವರು ಮಾದರಿಯಾಗಲಿ. ಟ್ರಕ್ಕಿಂಗ್ ವೇಳೆ ಇಲ್ಲಿಯ ಪ್ರತಿಯೊಂದು ಜೀವಿಯ, ಗಿಡ ಮರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ಒಂದಕ್ಕೊಂದು ಯಾವ ರೀತಿಯಲ್ಲಿ ಸಂಬಂಧಪಟ್ಟಿರುತ್ತವೆ. ಅದನ್ನು ಯಾವ ರೀತಿ ಉಳಿಸಬಹುದು ಎನ್ನುವ ಬಗ್ಗೆಯೂ ಅವರು ಅಧ್ಯಯನ ಮಾಡುತ್ತಾರೆ. ಇಷ್ಟೊಂದು ಕಾಳಜಿ ಇರುವವರು ನಮ್ಮಲ್ಲಿ ಯಾರೂ ಇಲ್ಲ ಎನ್ನುತ್ತಾರೆ ಪರಿಸರ ಪ್ರೇಮಿ ದಿನೇಶ್ ಹೊಳ್ಳ.