ಪುತ್ತೂರು (ದಕ್ಷಿಣಕನ್ನಡ): ಕೋವಿಡ್ ಪರೀಕ್ಷೆಯೂ ಆರೋಗ್ಯ ಕಾಪಾಡುವ ಒಂದು ಮಾರ್ಗ. ಹಾಗಾಗಿ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಸಮುದಾಯದ ಆರೋಗ್ಯ ಕಾಪಾಡಿಕೊಳ್ಳಿ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಸ್ವತಃ ಕೋವಿಡ್ ಪರೀಕ್ಷೆಗೊಳಗಾಗುವುದರ ಮೂಲಕ ನೆಲ್ಲಿಕಟ್ಟೆ ಶಾಲೆಯಲ್ಲಿ ನಡೆದ ಉಚಿತ ಕೊರೊನಾ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಉಚಿತ ಆರೋಗ್ಯ ತಪಾಸಣೆ ಎಂದಾಗ ಜನರು ಮುಂದೆ ಬರುತ್ತಾರೆ. ಆದರೆ, ಕೋವಿಡ್ ಪರೀಕ್ಷೆ ಎಂದಾಗ ಒಂದು ಹೆಜ್ಜೆ ಹಿಂದೆ ಹೋಗುತ್ತಾರೆ. ಜನರಲ್ಲಿ ಇದು ಕೂಡಾ ಆರೋಗ್ಯ ಕಾಪಾಡುವ ಒಂದು ಭಾಗ ಎಂದು ಅರಿವು ಮೂಡಿಸುವ ಅಗತ್ಯವಿದೆ. ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಎಲ್ಲಿ ನಮ್ಮನ್ನು ಅಸ್ಪೃಶ್ಯ ಭಾವನೆಯಿಂದ ನೋಡುತ್ತಾರೋ ಎಂಬ ಭಯವಿದೆ. ಅದನ್ನು ದೂರ ಮಾಡಬೇಕು ಎಂದರು.
ಇನ್ನು, ಪುತ್ತೂರು ನಾಲ್ಕು ತಾಲೂಕುಗಳ ಉಪವಿಭಾಗ. ಆದ್ದರಿಂದ ಈ ನಾಲ್ಕು ತಾಲೂಕುಗಳ ಮತ್ತು ಪಕ್ಕದ ಕಾಸರಗೋಡಿನಿಂದ ಜನರು ಇಲ್ಲಿಗೆ ಬರುತ್ತಾರೆ. ಅವರು ಇಲ್ಲಿಗೆ ಬರುವಾಗ ಕೊರೊನಾ ಮುಕ್ತ ವಾತಾವರಣವಿದ್ದರೆ ಇಲ್ಲಿಯ ವ್ಯವಹಾರಗಳು ನಿರ್ವಿಘ್ನವಾಗಿ ನಡೆಯಬಹುದು ಎಂಬ ನಿಟ್ಟಿನಲ್ಲಿ ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಪುತ್ತೂರು ನಗರವನ್ನೇ ಆಯ್ದುಕೊಂಡಿದ್ದೇವೆ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ, ರ‍್ಯಾಪಿಡ್ ಆ್ಯಂಟಿಜನ್ ಪರೀಕ್ಷೆಯಲ್ಲಿ ವ್ಯಕ್ತಿಯ ವರದಿ ನೆಗೆಟಿವ್ ಬಂದರೆ ಆತನಿಗೆ ಕೋವಿಡ್ ಇಲ್ಲ ಎಂದು ಭಾವಿಸಬೇಡಿ. ಜ್ವರ, ಶೀತ ಲಕ್ಷಣಗಳಿಲ್ಲದವರಲ್ಲಿ ನೆಗೆಟಿವ್ ಬಂದರೆ ಅವರ ಗಂಟಲು ದ್ರವದ ಮಾದರಿ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.