ಮಂಗಳೂರು: ಕೇರಳ ಪೊಲೀಸ್ ಸೋಗಿನಲ್ಲಿ ವಂಚಿಸಲೆತ್ನಿಸಿದ ನಗರದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯನ್ನು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಇಡುಕ್ಕಿಯ ಪಲ್ಲಿವಾಸಿಲ್ ನಿವಾಸಿ ಬೆನೆಡಿಕ್ಟ್ ಸಾಬು (25) ಬಂಧಿತ ಆರೋಪಿ.
ಬೆನೆಡಿಕ್ಟ್ ಸಾಬೂ ಮಂಗಳೂರಿನ ಪ್ರತಿಷ್ಠಿತ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಯಾಗಿದ್ದಾನೆ. ತಾನು ಪೊಲೀಸ್ ಅಧಿಕಾರಿಯೆಂದು ಬಿಂಬಿಸಿ ವಂಚಿಸಲು ಪ್ರಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಉರ್ವ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ RAW, KERALA STATE POLICE ಮತ್ತು AGRICULTURE DEPARTMENT AND FARMERS WELFARE DEPARTMENT KERALA 380 ಎಂಬ ಐಡಿ ಕಾರ್ಡ್ಗಳು ದೊರೆತಿದೆ. ಈತನಲ್ಲಿ ಒಂದು ಜೊತೆ PSI ಪೊಲೀಸ್ ಸಮವಸ್ತ್ರ, ಪೊಲೀಸ್ ಶೂಸ್, ಲೊಗೋ, ಮೆಡಲ್, ಬೆಲ್ಟ್, ಕ್ಯಾಪ್, 1 ಲ್ಯಾಪ್ ಟಾಪ್ ಮತ್ತು 2 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾಲೇಜಿನಲ್ಲಿ ನಡೆದ ಜಾಗೃತಿ ಕಾರ್ಯಕ್ರಮದ ವೇಳೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಲಭಿಸಿತ್ತು. ಬಳಿಕ ಪರಿಶೀಲನೆ ನಡೆಸಿದಾಗ ಈತ ನಕಲಿ ಪೊಲೀಸ್ ಎಂದು ತಿಳಿದುಬಂದಿದೆ. ಅಲ್ಲದೆ ಆತನಿಂದ ವಂಚನೆಗೊಳಗಾದ ಯಾವುದೇ ವ್ಯಕ್ತಿಗಳು ಉರ್ವ ಪೊಲೀಸ್ ಠಾಣೆ ಅಥವಾ ನಗರ ಪೊಲೀಸರನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪ ಆಯುಕ್ತರಾದ ಅಂಶು ಕುಮಾರ್ ಮತ್ತು ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸೆಂಟ್ರಲ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಸೂಚನೆಯಂತೆ ಉರ್ವ ಪೊಲೀಸರು ಕಾರ್ಯಚರಣೆ ನಡೆಸಿದ್ದರು.
ಅಕ್ರಮವಾಗಿ ಸಿಲಿಂಡರ್ ದಾಸ್ತಾನು.. ಓರ್ವ ಬಂಧನ: ನಗರದ ಅಳಕೆ ಪಕ್ಕದಲ್ಲಿರುವ ಜನನಿಬಿಡ ವಸತಿ ಸಂಕೀರ್ಣದ ಬಳಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ದಾಸ್ತಾನು ಮಾಡಿದ್ದ ಓರ್ವನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಶೇಖ್ ಆಶಪ್ ಉದ್ದೀನ್ (59) ಬಂಧಿತ ಆರೋಪಿ.
ನಗರದ ಅಳಕೆ ನ್ಯೂಚಿತ್ರಾ ಮಸೀದಿ ಪಕ್ಕದಲ್ಲಿರುವ ಮಂಗಳೂರು ಗ್ಯಾಸ್ ಲೈಟ್ ಅಂಡ್ ಸರ್ವೀಸ್ ಸೆಂಟರ್ ಅಂಗಡಿಯ ಪಕ್ಕದ ಸಣ್ಣ ಕೊಠಡಿಯಲ್ಲಿ ಗ್ಯಾಸ್ ಸಿಲಿಂಡರ್ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಸಂಬಂಧ ದಾಳಿ ನಡೆಸಿದ ಪೊಲೀಸರು, 3 ಗೃಹ ಬಳಕೆಯ ಇಂಡೇನ್ ಮತ್ತು ಹೆಚ್ಪಿ ಗ್ಯಾಸ್ ಸಿಲಿಂಡರ್ಗಳು ಸೇರಿದಂತೆ ಒಟ್ಟು 26 ವಿವಿಧ ಆಳತೆಯ ಗ್ಯಾಸ್ ಸಿಲಿಂಡರ್ಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದ್ವೇಷ ಹತ್ಯೆ ಹೆಚ್ಚಳ, ಎಚ್ಚೆತ್ತ ಸಿಸಿಬಿ: ಪ್ರಮುಖ ರೌಡಿಶೀಟರ್ಗಳಿಗೆ ಎಚ್ಚರಿಕೆ