ಮಂಗಳೂರು: ಮತಾಂತರವಾಗುವ ಆತಂಕದಿಂದ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಫ್ರೈಡ್ ರೈಸ್ ನಲ್ಲಿ ವಿಷ ಹಾಕಿ ತಿನ್ನಿಸಿ ತಾವೂ ಸಾವನ್ನಪ್ಪಿದ ಘಟನೆ ಮಂಗಳೂರಿನ ಮೋರ್ಗನ್ ಗೇಟ್ ನಲ್ಲಿ ನಡೆದಿದೆ.
ನಾಗೇಶ್ ಶೇರಿಗುಪ್ಪಿ (30),ಆತನ ಪತ್ನಿ ವಿಜಯಲಕ್ಷ್ಮಿ( 26), ಸಪ್ನ (8) ಮತ್ತು ಸಮರ್ಥ್ (4) ಸಾವಿಗೀಡಾದವರು. ನಾಗೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಆತ್ಮಹತ್ಯೆಗೂ ಮುನ್ನ ಪತ್ನಿ ಮತ್ತುಇಬ್ಬರು ಮಕ್ಕಳಿಗೆ ಫ್ರೈಡ್ ರೈಸ್ ನಲ್ಲಿ ವಿಷ ಹಾಕಿ ಹತ್ಯೆ ಮಾಡಿದ್ದಾನೆ. ಇವರು ಬಾಗಲಕೋಟೆ ಜಿಲ್ಲೆಯ ಬೀಳಗಿ ಗ್ರಾಮದ ಸುನಗ್ ಗ್ರಾಮದವರಾಗಿದ್ದಾರೆ. ನಾಗೇಶ್ ಡ್ರೈವರ್ ಆಗಿ ಮತ್ತು ವಿಜಯಲಕ್ಷ್ಮಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ದಂಪತಿಗಳ ನಡುವೆ ಕಲಹವಿದ್ದು ನಾಗೇಶ್ ತನ್ನ ಪತ್ನಿಗೆ ಹಿಂಸೆ ನೀಡುತ್ತಿರುವ ಬಗ್ಗೆ ತಿಳಿದುಬಂದಿದೆ. ಅಕ್ಟೋಬರ್ನಲ್ಲಿ ವಿಜಯಲಕ್ಷ್ಮಿ ತನ್ನಿಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ನಾಗೇಶ್ ದೂರು ನೀಡಿದ್ದರು. ಆದರೆ, ಕೆಲ ದಿನಗಳ ಬಳಿಕ ಆಕೆಯೇ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ಪತಿ ಹಿಂಸೆ ನೀಡುತ್ತಿದ್ದರಿಂದ ಸಂಬಂಧಿಕರ ಮನೆಯಲ್ಲಿ ಇದ್ದೆ. ಮತ್ತೆ ಪತಿಯೊಂದಿಗೆ ಸಂಸಾರ ಮಾಡುತ್ತಿದ್ದೇನೆ ಎಂದು ಹೇಳಿ ಹೋಗಿದ್ದರು.ಇದೀಗ ಈ ರೀತಿ ಆಗಿದೆ.
ನಾಗೇಶ್ ಪತ್ನಿ ಮತ್ತು ಮಕ್ಕಳಿಗೆ ಪ್ರೈಡ್ ರೈಸ್ನಲ್ಲಿ ವಿಷ ಹಾಕಿದ್ದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ತನ್ನ ಪತ್ನಿ ವಿಜಯಲಕ್ಷ್ಮಿ ಬೇರೆ ಧರ್ಮದ ಯುವತಿಯ ಜೊತೆ ಕೆಲಸ ಮಾಡುತ್ತಿದ್ದು, ಅವರು ಮತಾಂತರ ಮಾಡಲು ಆಕೆಯನ್ನು ಪ್ರಯತ್ನಿಸುತ್ತಿದ್ದರಂತೆ. ಆ ಕಾರಣಕ್ಕೆ ಕೃತ್ಯ ಎಸಗಿದ್ದೇನೆ ಎಂದು ಆತ ಡೆತ್ನೋಟ್ನಲ್ಲಿ ಬರೆದಿದ್ದಾನೆ ಎಂದು ತಿಳಿಸಿದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯೋರ್ವಳನ್ನುವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದರು.