ಮಂಗಳೂರು: ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾವು ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಸ್ಥಳದಲ್ಲಿ ಸಿಕ್ಕ ಗುರುತಿನ ಚೀಟಿ ಆಧಾರದ ಮೇಲೆ ಮಡಿಕೇರಿ ಅಂಚೆ ಕಚೇರಿ ಉದ್ಯೋಗಿ ಅಶೋಕ್, ಅವರ ಪತ್ನಿ ಹೇಮಲತಾ ಹಾಗೂ ಅವರ ಮಕ್ಕಳಾದ ವತ್ಸ, ಯಶಸ್ ಎಂದು ಗುರುತಿಸಲಾಗಿದೆ. ಮಂಗಳೂರಿಗೆ ಬಂದು ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಪತಿ - ಪತ್ನಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕೃಷಿ ಹೊಂಡದಲ್ಲಿ ಇದ್ದ ಕಾರನ್ನು ಮೇಲಕ್ಕೆತ್ತಲಾಗಿದೆ. ಕೃಷಿ ಹೊಂಡದಲ್ಲಿ ಇದ್ದ ನೀರಿದ್ದರಿಂದಾಗಿ ಕಾರಿನಲ್ಲಿ ಇದ್ದ ನಾಲ್ವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.