ಮಂಗಳೂರು: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ನಾಲ್ವರು ಕುಖ್ಯಾತ ದುಷ್ಕರ್ಮಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕುಂಜತ್ತಬೈಲ್ ದೇವಿನಗರ ನಿವಾಸಿ ರಾಜಾ ಅಲಿಯಾಸ್ ಜಪಾನ್ ಮಂಗ, ಬೆಂಗ್ರೆ ನಿವಾಸಿ ಕಬೀರ್, ಸುರತ್ಕಲ್ ಕೃಷ್ಣಾಪುರ ಚೊಕ್ಕಬೆಟ್ಟು 8ನೇ ನಿವಾಸಿ ನಿಸಾರ್ ಹುಸೇನ್, ಕಣ್ಣೂರು ಪಡೀಲ್ ನಿವಾಸಿ ಪ್ರಕಾಶ್ ಶೆಟ್ಟಿ ಬಂಧಿತರು.
ರಾಜಾ ಅಲಿಯಾಸ್ ಜಪಾನ್ ಮಂಗ ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ಯೆ, ಹತ್ಯೆ ಯತ್ನ, ಹಲ್ಲೆ ಹಾಗು ದರೋಡೆ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಬಳಿಕ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆೇ ಪೊಲೀಸರ ಕೈಗೂ ಸಿಗದೇ 2017ರಿಂದ ತಲೆಮರೆಸಿಕೊಂಡಿದ್ದನು. ಇದೀಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಕಬೀರ್ ವಿರುದ್ಧ ದಾಖಲಾಗಿರುವ 8 ಪ್ರಕರಣಗಳಲ್ಲಿ ಜಾಮೀನುರಹಿತ ವಾರಂಟ್ ಇತ್ತು. ಇದೀಗ ಆತ ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ನಿಸಾರ್ ಹುಸೇನ್ ವಿರುದ್ಧ ದ.ಕ.ಜಿಲ್ಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಈತನ ವಿರುದ್ಧವೂ ಜಾಮೀನುರಹಿತ ವಾರಂಟ್ ಇತ್ತು. ಪ್ರಕಾಶ್ ಶೆಟ್ಟಿ ವಿರುದ್ಧ ಮಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಆರೋಪಿಯ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು. ಇದೀಗ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ಗ್ಯಾಂಗ್ ಅಟ್ಯಾಕ್: ದಾವಣಗೆರೆಯಲ್ಲಿ ಬುಧವಾರ ನಡೆದ ಮತ್ತೊಂದು ಪ್ರಕರಣದಲ್ಲಿ ರೌಡಿಶೀಟರ್ ಗ್ಯಾಂಗ್ ಮೇಲೆ ಮತ್ತೊಂದು ರೌಡಿಶೀಟರ್ ಗುಂಪು ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಘಟನೆಯಲ್ಲಿ ಒಬ್ಬ ರೌಡಿಶೀಟರ್ ಸಾವನ್ನಪ್ಪಿದರೆ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಆಂಜನೇಯ ಅಲಿಯಾಸ್ ಆಂಜನಿ (30) ಮೃತ ಆರೋಪಿ. ಮಧು ತೀವ್ರವಾಗಿ ಗಾಯಗೊಂಡಿರುವ ಆರೋಪಿ. ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜನಿ ಮತ್ತು ಮಧು ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಸ್ಪಿ ರಿಷ್ಯಂತ್ ಮಾಹಿತಿ: ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆಂಜನಿ ಮತ್ತು ಮಧುಗೆ ಕೆಲವು ದಿನಗಳ ಹಿಂದಷ್ಟೇ ಜಾಮೀನು ಸಿಕ್ಕಿದ್ದು, ಜೈಲಿನಿಂದ ಬಿಡುಗಡೆ ಹೊಂದಿದ್ದರು. ಇದೇ ವಿಚಾರವಾಗಿ ಆರೋಪಿ ಆಂಜನಿ ಮತ್ತು ಮಧು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಈ ವೇಳೆ ಸ್ಕಾರ್ಪಿಯೋ ವಾಹನದಲ್ಲಿ ಬಂದ ಮತ್ತೊಂದು ರೌಡಿಶೀಟರ್ ಗುಂಪು ಈ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಆ ಬಳಿಕ ಸ್ಕಾರ್ಪಿಯೋ ವಾಹನವನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ರೌಡಿಶೀಟರ್ಗಳ ಗ್ಯಾಂಗ್ ವಾರ್: ಸ್ಥಳದಲ್ಲೇ ಒಬ್ಬ ರೌಡಿಶೀಟರ್ ಸಾವು, ಇನ್ನೊಬ್ಬನಿಗೆ ತೀವ್ರ ಗಾಯ