ಮಂಗಳೂರು: ದ.ಕ ಜಿಲ್ಲೆಯಲ್ಲಿ ಇಂದು ವಿಮಾನ ಸಿಬ್ಬಂದಿ ಸೇರಿದಂತೆ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಅಶೋಕ ನಗರದಲ್ಲಿರುವ ಮರಿಯಾ ಫ್ರಾಕ್ಸಿಮಸ್ ಫ್ಲ್ಯಾಟ್ನಲ್ಲಿ ವಾಸವಿರುವ 27 ವರ್ಷದ ಈ ವ್ಯಕ್ತಿ ಮೇ 20ರಂದು ಮನೆಗೆ ಆಗಮಿಸಿದ್ದರು. ವಿಮಾನಯಾನ ಸಚಿವಾಲಯದ ನಿಯಮಾವಳಿಯಂತೆ ಪುನಃ ಕರ್ತವ್ಯಕ್ಕೆ ಹಾಜರಾಗುವ ಮೊದಲು ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಇಂದು ವರದಿ ಬಂದಿದ್ದು, ಅವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಕಲ್ಲೇರಿ ಬೆಳ್ತಂಗಡಿ ನಿವಾಸಿ 45 ವರ್ಷದ ಮಹಿಳೆ, ಗುಜರಾತ್ನಿಂದ ಆಗಮಿಸಿರುವ 50 ವರ್ಷದ ವ್ಯಕ್ತಿ, 24 ವರ್ಷದ ಮಹಿಳೆ ಫೆಬ್ರವರಿಗೆ ಬಹರೈನ್ನಿಂದ ಪೂನಾ ಮಾರ್ಗವಾಗಿ ಮಂಗಳೂರಿಗೆ ಆಗಮಿಸಿದ್ದರು. ಇವರು ಇದೀಗ ಬಹರೈನ್ಗೆ ಹೋಗಲು ಇಚ್ಛಿಸಿದ್ದು, ಖಾಸಗಿಯಾಗಿ ಗಂಟಲು ದ್ರವ ಪರೀಕ್ಷೆ ಮಾಡಿದ ಸಂದರ್ಭ ಅವರಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಇವರೆಲ್ಲರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕೋವಿಡ್-19 ಸೋಂಕು ಶಂಕೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಇಂದು 49 ಮಂದಿಯ ಗಂಟಲು ದ್ರವದ ಸ್ಯಾಂಪಲ್ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಹಿಂದೆ ಪರೀಕ್ಷೆಗೆಂದು ಕಳುಹಿಸಿರುವ 81 ಮಂದಿಯ ಗಂಟಲು ದ್ರವದ ವರದಿ ಬಂದಿದ್ದು, ಆ ಪೈಕಿ 4 ಜನರಲ್ಲಿ ಸೋಂಕು ದೃಢಪಟ್ಟಿದೆ. 77 ಮಂದಿ ವರದಿ ನೆಗೆಟಿವ್ ಬಂದಿದೆ. 193 ಮಂದಿಯ ವರದಿ ಬರಬೇಕಾಗಿದ್ದು, ಒಟ್ಟು 29 ಮಂದಿ ನಿಗಾದಲ್ಲಿದ್ದಾರೆ. 17 ಮಂದಿಯನ್ನು ಮಂಗಳೂರಿನ ಇಎಸ್ಐ ಹಾಸ್ಪಿಟಲ್ನಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು, 3 ಮಂದಿಯನ್ನು ಸುರತ್ಕಲ್ನ ಎನ್ಐಟಿಕೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ವೆನ್ಲಾಕ್ ಆಸ್ಪತ್ರೆಯ ಕ್ವಾರಂಟೈನ್ನಲ್ಲಿ ಯಾರೂ ಇಲ್ಲ. ಇಂದು 32 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಮಂಗಳೂರಲ್ಲಿ ಈವರೆಗೆ 42,572 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ.
ಈವರೆಗೆ ಒಟ್ಟು 8,996 ಮಂದಿಯ ಗಂಟಲು ದ್ರವ ಪಡೆಯಲಾಗಿದ್ದು, 8,797 ಮಂದಿಯ ವರದಿ ಬಂದಿದೆ. ಆ ಪೈಕಿ 8,660 ಮಂದಿಯ ವರದಿ ನೆಗೆಟಿವ್ ಬಂದಿದ್ದು, 137 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 56 ಮಂದಿ ಚಿಕಿತ್ಸೆ ಮುಗಿಸಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 74 ಮಂದಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 7 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.