ಪುತ್ತೂರು: ಕಡಬ ತಾಲೂಕಿನ ಬಿಳಿನೆಲೆ ಗ್ರಾ.ಪಂ. ವ್ಯಾಪ್ತಿಯ ನೆಟ್ಟಣದಲ್ಲಿ ಆಹಾರ ಇಲಾಖೆ ಮತ್ತು ಪಂಚಾಯತ್‌ನಿಂದ ಅನುಮತಿ ಪಡೆದು ಸ್ಥಳೀಯ ನಿವಾಸಿ ಹರಿಣಿ ಎಂಬವರು ಆರಂಭಿಸಿದ ಕೋಳಿ ಮತ್ತು ಹಂದಿ ಮಾಂಸ ಮಾರಾಟ ಕೇಂದ್ರಕ್ಕೆ ಪಂಚಾಯತ್ ವತಿಯಿಂದ ಬೀಗ ಜಡೆದಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸೋಮವಾರ ಪುತ್ತೂರಿನ ತಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ, ನ್ಯಾಯವಾದಿ ಬಿ.ಎಂ. ಭಟ್ ಮಾತನಾಡಿ, ಪಂಚಾಯತ್‌ನ ಪರವಾನಗಿ ಹಾಗೂ ಆಹಾರ ಇಲಾಖೆಯ ಅನುಮತಿ ಪಡೆದುಕೊಂಡು ಹರಿಣಿ ಎಂಬವರು ಕೋಳಿ ಮತ್ತು ಮಾಂಸದ ಅಂಗಡಿಯನ್ನು ಇಲ್ಲಿನ ಬಾಡಿಗೆ ಕಟ್ಟಡದಲ್ಲಿ ಆರಂಭಿಸಿದ್ದರು. ಪರವಾನಗಿ ನೀಡಲು ಪಿಡಿಒ ಅವರು 3 ಸಾವಿರ ರೂಪಾಯಿ ಲಂಚವನ್ನು ಪಡೆದುಕೊಂಡಿದ್ದಾರೆ. ಆ ಬಳಿಕ ಯಾವುದೇ ನೋಟಿಸ್ ನೀಡದೆ ಅಂಗಡಿಗೆ ಬೀಗ ಹಾಕಿದ್ದಾರೆ. ಬಳಿಕ ಈ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದಾಗ ಅವರು ಅಂಗಡಿ ಬಾಗಿಲು ತೆಗೆಸಿಕೊಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಕಾರ್ಯನಿರ್ವಹಣಾಧಿಕಾರಿಗಳು ರೂ. 15 ಸಾವಿರ ಲಂಚದ ಬೇಡಿಕೆ ಇಟ್ಟಿದ್ದಾರೆ. ಮೇಲಾಧಿಕಾರಿಗಳಿಗೆ ನೀಡಲು ಕನಿಷ್ಠ 10 ಸಾವಿರವಾದರೂ ನೀಡುವಂತೆ ತಿಳಿಸಿದ್ದಾರೆ. ಇದೀಗ ಮತ್ತೆ ಒಂದು ವಾರದ ಗಡುವು ನೀಡಿದ್ದಾರೆ. ವಾರದ ಒಳಗಾಗಿ ನಮಗೆ ನ್ಯಾಯ ಸಿಗದೆ ಹೋದಲ್ಲಿ ಮುಂದೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಅಥವಾ ಮನೆಯ ಮುಂಭಾಗದಲ್ಲಿ ಅನ್ಯಾಯಕ್ಕೆ ಒಳಗಾದ ಕುಟುಂಬದೊಡನೆ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.
ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಲ್. ಮಂಜುನಾಥ್ ಮಾತನಾಡಿ, ಹರಿಣಿ ಅವರ ಅಂಗಡಿಗೆ ಬೀಗ ಹಾಕಿ 64 ದಿನಗಳೇ ಕಳೆದರೂ ಈ ತನಕ ತೆರವುಗೊಳಿಸಿರುವುದಿಲ್ಲ. ಅಲ್ಲದೆ ಅಂಗಡಿ ಒಳಗಿರುವ ಸೊತ್ತುಗಳನ್ನು ಹಿಂದಿರುಗಿರಿಸಿರುವುದಿಲ್ಲ. ಅಧಿಕಾರಿಗಳು ದುರುದ್ದೇಶಪೂರ್ವಕವಾಗಿ ಈ ಬಡ ಕುಟುಂಬವನ್ನು ಬೀದಿಗೆ ತಳ್ಳುವ ಕೆಲಸ ಮಾಡಿದ್ದಾರೆ. ಇಂದು ಸಾಂಕೇತಿಕ ಧರಣಿ ನಡೆಸಲಾಗುತ್ತಿದ್ದು, ಇದಕ್ಕೆ ಸ್ಪಂದನೆ ಸಿಗದಿದ್ದಲ್ಲಿ ಉಸ್ತುವಾರಿ ಸಚಿವರ ಮುಂದೆ ಸಿಐಟಿಯು ವತಿಯಿಂದ ಉಗ್ರ ಪ್ರತಿಭಟನೆ, ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ಅಂಗಡಿ ಮಾಲಕಿಯ ಅತ್ತೆ ಮಾಧ್ಯಮದ ಮುಂದೆ ತಮಗೆ ಆದ ಅನ್ಯಾಯವನ್ನು ತೋಡಿಕೊಂಡರು. ಈ ಸಂದರ್ಭದಲ್ಲಿ ಅಂಗಡಿ ಮಾಲೀಕರಾದ ಹರಿಣಿ, ಅವರ ಪತಿ ನಿತಿನ್ ಶೆಟ್ಟಿ, ಅತ್ತೆ ವಿಮಲ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.