ಮೂಡುಬಿದಿರೆ(ದ.ಕ): ಸಂಸದರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರ ದೂರದರ್ಶಿತ್ವದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಎನ್ಐಟಿಕೆ, ವಿಮಾನ ನಿಲ್ದಾಣ ಸಹಿತ ಅಭಿವೃದ್ಧಿ ಕಾರ್ಯಗಳಾಗಿವೆ. ಆದ್ದರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಜಿ ಸಂಸದ ಶ್ರೀನಿವಾಸ ಮಲ್ಯ ಅವರ ಹೆಸರಿಡಲು ಹೋರಾಟ ಮಾಡಲಾಗುತ್ತದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಮೂಡುಬಿದಿರೆಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಗೆ 50 ವರ್ಷಕ್ಕೆ ಆಡಳಿತ ನಡೆಸಲು ಹಸ್ತಾಂತರಿಸಲಾಗಿತ್ತು. ಆದರೆ ಅದೀಗ ಅದಾನಿ ವಿಮಾನ ನಿಲ್ದಾಣ ಮರುನಾಮಕರಣಗೊಂಡಿರುವುದು ದುರದೃಷ್ಟಕರ ಎಂದು ಹೇಳಿದರು.
ಶ್ರೀನಿವಾಸ ಮಲ್ಯರ ಕೊಡುಗೆಗಳು, ಸೇವೆ, ಸಾಧನೆಯ ದಾಖಲೆ ಮುರಿಯಲಾಗದ್ದು. ನೆಹರೂ ಅವರ ಮನವೊಲಿಸಿ ಪಡೆದಿದ್ದ ಈ ವಿಮಾನ ನಿಲ್ದಾಣ ಮುಂದೆ ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ, ಜನಾರ್ದನ ಪೂಜಾರಿಯವರ ಪರಿಶ್ರಮದಿಂದ ರಾಜೀವ ಗಾಂಧಿಯವರ ಸಹಕಾರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಬೆಳೆದು ನಿಂತಿತು. ಮುಂದಿನ ತಲೆಮಾರಿಗೆ ಶ್ರೀನಿವಾಸ ಮಲ್ಯರ ಕೊಡುಗೆಗಳು ಸದಾ ನೆನಪಲ್ಲಿ ಉಳಿಯಲು ಅವರ ಹೆಸರಿಡಬೇಕಾದ ಸ್ಥಳದಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರ ಹೆಸರಿಟ್ಟು ಕೇಂದ್ರ ಸರ್ಕಾರ ಜನತೆಗೆ ವಂಚಿಸಿದೆ ಎಂದವರು ಹೇಳಿದರು.
ದ.ಕ ಜಿಲ್ಲೆಗೆ ಅದಾನಿ ಕೊಡುಗೆ ಶೂನ್ಯ. ಅದಾನಿ ನಾಮಕರಣವನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಜೈನ್ ತಿಳಿಸಿದರು.