ಮಂಗಳೂರು: ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ದೇಶ ಸರಿಯಾಗಬೇಕಾದರೆ ಮೊದಲು ಹಣಕಾಸು ಸಚಿವರನ್ನು ಬದಲಾಯಿಸಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಗ್ರಹಿಸಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಹಣಕಾಸು ಸಚಿವರು ಆರ್ಥಿಕ ಪರಿಸ್ಥಿತಿ ಸುಧಾರಿಸಲು ವಿಫಲರಾಗಿದ್ದಾರೆ. ಅವರು ಹಣಕಾಸು ಸಚಿವರಾಗಿ ಒಂದೇ ಒಂದು ಒಳ್ಳೆಯ ಕೆಲಸ ಮಾಡಿಲ್ಲ. ಆಂಧ್ರ ಪ್ರದೇಶದ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ, ಅವರು ಹಣಕಾಸು ಸಚಿವರಾಗಿ ಕರ್ನಾಟಕಕ್ಕೆ ಅವಮಾನವಾಗುವ ಪರಿಸ್ಥಿತಿ ಬಂದಿದೆ ಎಂದು ದೂರಿದರು.
ಕಾನೂನು ಬದ್ಧವಾಗಿ ಕರ್ನಾಟಕ ರಾಜ್ಯಕ್ಕೆ ಜಿಎಸ್ಟಿ ಹಕ್ಕು ಸಿಗಬೇಕು. ಅದನ್ನು ನೀಡದೆ ಸಾಲ ತೆಗೆದುಕೊಳ್ಳಲು ಸೂಚಿಸಿರುವುದು ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವ ನಡೆಯಾಗಿದೆ. ಇಂತಹ ಹೇಳಿಕೆ ನೀಡಲು ಕೇಂದ್ರ ಸರ್ಕಾರಕ್ಕೆ ನಾಚಿಕೆಯಾಗಬೇಕು. ಮುಖ್ಯಮಂತ್ರಿಗಳು ಸಾಲ ತೆಗೆಯುವುದನ್ನು ನಿರಾಕರಿಸಬೇಕು. ರಾಜ್ಯದಿಂದ ಆಯ್ಕೆಯಾದ 28 ಸಂಸದರು ಈ ಕುರಿತು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಆ ಸಂಸದರಿಗೆ ಮೋದಿ ಹೆಸರಲ್ಲಿ ಗೆದ್ದು ಬಂದಿದ್ದೇವೆ ಎಂಬ ಭಯ ಕಾಡುತ್ತಿದೆ. ನಿಮ್ಮನ್ನು ಮೋದಿ ಗೆಲ್ಲಿಸಿದ್ದಲ್ಲ. ಜನರು ಗೆಲ್ಲಿಸಿದ್ದು. ಜನರಿಗೆ ದ್ರೋಹ ಮಾಡಬೇಡಿ ಎಂದು ಬಿಜೆಪಿ ಸಂಸದರ ವಿರುದ್ಧ ಹರಿಹಾಯ್ದರು.