ಮಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಸಿಡಿ ಪ್ರಕರಣ ಮತ್ತು ಆರು ಸಚಿವರು ತಮ್ಮ ವಿರುದ್ದ ಸುದ್ದಿ ಬಿತ್ತರಿಸದಂತೆ ಕೋರ್ಟ್ಗೆ ಮೊರೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರಶ್ನಿಸಿ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.
ಅವರ ಸರ್ಕಾರವಿದ್ದು, ಈ ಬಗ್ಗೆ ಅವರು ಉತ್ತರಿಸಲಿ. ಕಾಂಗ್ರೆಸ್ ಪಕ್ಷಕ್ಕೆ ಜನರ ಸಮಸ್ಯೆ ವಿರುದ್ದ ಮಾತನಾಡಲು ತುಂಬಾ ವಿಚಾರಗಳಿದೆ ಎಂದು ಹೇಳಿ ಪ್ರತಿಕ್ರಿಯೆಗೆ ನಿರಾಕರಿಸಿದರು. ಒಂದು ದೇಶ ಒಂದು ಚುನಾವಣೆ ವಿಚಾರ ಆಕಾಶಕ್ಕೆ ಏಣಿ ಇಟ್ಟಂತೆ. ಎಲ್ಲಿಂದ ಎಲ್ಲಿಗೆ ಮೆಟ್ಟಿಲು ಇಡುವುದೆಂದೇ ಗೊತ್ತಿಲ್ಲ. ಇದರಿಂದ ಸಂವಿಧಾನದ ಮೂಲಚೌಕಟ್ಟಿಗೆ ಹೊಡೆತ ಬೀಳಲಿದೆ ಎಂದರು.
ಕೋಸ್ಟ್ ಗಾರ್ಡ್ ಅಕಾಡೆಮಿಗೆ ನೀಡಲಾದ ಜಾಗದಲ್ಲಿ ಇದ್ದ ಗೋಶಾಲೆಯನ್ನು ಕೆಡವಿದ ವಿಚಾರದಲ್ಲಿ ಮಾತನಾಡಿದ ಅವರು ಗೋಶಾಲೆ ಕೆಡವಿದ ಬಳಿಕ ಗೋವುಗಳಿಗೆ ಪರ್ಯಾಯ ವ್ಯವಸ್ಥೆ ಯಾಕೆ ಮಾಡಿಲ್ಲ. ಜಿಲ್ಲಾಡಳಿತ ಗೋವುಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಅಕ್ರಮ ಮರಳು ಸಾಗಾಟಕ್ಕೆ ಇಲಾಖಾಧಿಕಾರಿ ನಿರಂಜನ್ ಕಾರಣ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿ ನಿರಂಜನ್ ಅವರು ಕಾರಣ. ಅವರ ವಿರುದ್ಧ ಮುಖ್ಯಮಂತ್ರಿ ಮತ್ತು ಚೀಪ್ ಸೆಕ್ರೆಟರಿ ಅವರಿಗೆ ದೂರು ನೀಡಲಾಗುವುದು ಎಂದರು.