ಮಂಗಳೂರು: ನಗರದ ಪಚ್ಚನಾಡಿಯ ತ್ಯಾಜ್ಯರಾಶಿಯು ಕುಡುಪು ಸಮೀಪದ ಮಂದಾರ ಪ್ರದೇಶಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ರಮಾನಾಥ ರೈ, ಶಾಸಕ ಯು ಟಿ ಖಾದರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪ್ರವಾಹ ಪೀಡಿತ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆಂದು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡ ಕಾಂಗ್ರೆಸ್ ಮುಖಂಡರ ತಂಡ ಇಂದು ಬೆಳಗ್ಗೆ ಮಂದಾರ ತ್ಯಾಜ್ಯರಾಶಿ ಕುಸಿತಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ಸಂದರ್ಭ ಮಂದಾರದ ನಿವಾಸಿಗಳು ರಾಜಕೀಯ ಪ್ರತಿನಿಧಿಗಳಿಗೆ ತಮ್ಮ ಸಂಕಷ್ಟಗಳನ್ನು ತಿಳಿಸಿ ಅಳಲು ತೋಡಿಕೊಂಡರು. ಅಲ್ಲದೆ ತುಳು ರಾಮಾಯಣದ ಕರ್ತೃ ಮಂದಾರ ಕೇಶವ ಭಟ್ಟರ 101 ವರ್ಷಗಳ ಇತಿಹಾಸವಿರುವ ಮನೆಯೂ ತ್ಯಾಜ್ಯರಾಶಿಯ ಕಬಂಧ ಬಾಹುವಿಗೆ ಸಿಲುಕಿರುವುದನ್ನು ಕಂಡು ಖೇದ ವ್ಯಕ್ತಪಡಿಸಿದರು. ಈ ಸಂದರ್ಭ ಕೃಷಿ ಇಲಾಖಾ ನಿರ್ದೇಶಕಿ ವೀಣಾ, ಸಹಾಯಕ ಕೃಷಿ ಅಧಿಕಾರಿ ವಿ ಎಸ್ ಕುಲಕರ್ಣಿ ಹಾಗೂ ಗ್ರಾಮ ಲೆಕ್ಕಿಗ ಮಹೇಶ್ ಅವರೊಂದಿಗೆ ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸಿದರು.
ಶಾಸಕ ಯು ಟಿ ಖಾದರ್ ಮಾತನಾಡಿ, ಮಂದಾರದ ಈ ತ್ಯಾಜ್ಯರಾಶಿ ಕುಸಿತ ಪ್ರದೇಶಕ್ಕೆ ನಾನು ಹತ್ತು ದಿನಗಳ ಹಿಂದೆ ಭೇಟಿ ನೀಡಿದ್ದು, ಇಂದು ಮತ್ತೊಮ್ಮೆ ಭೇಟಿ ನೀಡುತ್ತಿದ್ದೇನೆ. ಆದರೆ, ಅಂದಿನ ಪರಿಸ್ಥಿತಿ ಇಂದೂ ಕೂಡಾ ಮುಂದುವರಿದಿದೆ. ಯಾವುದೇ ಬದಲಾವಣೆ ಆಗಿಲ್ಲ. ಸ್ಥಳೀಯ ಕಾರ್ಪೊರೇಟರ್ ಭಾಸ್ಕರ್ ಮೊಯ್ಲಿಯವರು ಸ್ಥಳೀಯ ಮಟ್ಟದಲ್ಲಿ ಯಾವೆಲ್ಲ ರೀತಿ ಕೆಲಸ ಮಾಡಬಹುದೋ ಅದನ್ನು ಮಾಡಿದ್ದಾರೆ. ಹೌಸಿಂಗ್ ಬೋರ್ಡ್ಗೆ ಇಲ್ಲಿನ 26 ಕುಟುಂಬಗಳ ಸ್ಥಳಾಂತರ, ಸಂಪರ್ಕ ಕಡಿತಗೊಂಡಿರುವುದರಿಂದ ಹೊಸದಾಗಿ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯಗಳ ವ್ಯವಸ್ಥೆಗಳನ್ನು ಅವರು ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಇದು ಬಹುದೊಡ್ಡ ಸಮಸ್ಯೆ. ಈ ಸಮಸ್ಯೆ ನಿವಾರಣೆ ಮಾಡಲು ಕಾರ್ಯತಂತ್ರ ಅಗತ್ಯ. 15 ದಿನಗಳಿಂದ ಗಂಡಾಂತರ ಸೃಷ್ಟಿಯಾಗಿದೆ. ಮಳೆ ನಿಂತ ಬಳಿಕ ಇಡೀ ಮಂಗಳೂರಿಗೆ ಸಾಂಕ್ರಾಮಿಕ ರೋಗ ಹರಡುತ್ತದೆ. ಇಲ್ಲಿನ ಜನರ ಮುಂದಿನ ಭವಿಷ್ಯದ ಬಗ್ಗೆ ಚಿಂತನೆ ನಡೆಸಲು ಕಾರ್ಯಯೋಜನೆ ಮಾಡಬೇಕು. ಇಷ್ಟರವರೆಗೆ ಬರೀ 10 ಸಾವಿರ ರೂ. ನೀಡಲಾಗಿದೆ. ಇದು ಎಲ್ಲಿಗೆ ಸಾಕಾಗುತ್ತದೆ. ಅಕ್ಕಿಯನ್ನು ಸಿದ್ದರಾಮಯ್ಯ ಸರ್ಕಾರ ನೀಡುತ್ತಿದೆ. ಬೇರೆ ಅಗತ್ಯದ ವಸ್ತುಗಳಿಗೆ ಸಂತ್ರಸ್ತರು ಸಾಲ ಮಾಡಬೇಕಾಗುತ್ತದೆ. ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿಯೂ ಈವರೆಗೆ ಯಾವುದೇ ಕಾರ್ಯತಂತ್ರ ಕೈಗೊಂಡಿಲ್ಲ. ತಕ್ಷಣ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಖಾದರ್ ಹೇಳಿದರು.
ಇಲ್ಲಿನ ಜನಪ್ರತಿನಿಧಿಗಳು ಮುಖ್ಯಮಂತ್ರಿಯ ದಕ್ಷಿಣಕನ್ನಡ ಜಿಲ್ಲೆಯ ಭೇಟಿಯ ಸಂದರ್ಭ ಇಲ್ಲಿಗೆ ಯಾಕೆ ಕರೆದುಕೊಂಡು ಬಂದಿಲ್ಲ. ಇದಕ್ಕಿಂತ ದೊಡ್ಡ ಪ್ರಾಕೃತಿಕ ವಿಕೋಪ ಬೇರೆ ಯಾವುದಿದೆ. ಅಲ್ಲದೆ ಇದಕ್ಕೆ ಸಂಬಂಧಪಟ್ಟ ಯಾವುದೇ ಅಧಿಕಾರಿಗಳ ತಂಡ ಇಲ್ಲಿಗೆ ಭೇಟಿ ನೀಡಿಲ್ಲ. ಜೊತೆಗೆ ಇಲ್ಲಿನ ಸಂಸದರು ಮತ್ತು ಶಾಸಕರು ಹಿಂದಿನ ಸರ್ಕಾರ ಮಾಡಿಲ್ಲ ಎಂದು ದೂರುತ್ತಿದೆ. ಹಿಂದೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮಾತ್ರ ಅಧಿಕಾರ ವಹಿಸಿರಲಿಲ್ಲ. ಬಿಜೆಪಿಯೂ ಅಧಿಕಾರದಲ್ಲಿತ್ತು. ಈ ಬಗ್ಗೆ ಮತ್ತೊಬ್ಬರು ಮೇಲೆ ಗೂಬೆ ಕೂರಿಸುವ ಮೊದಲು ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಯೋಚನೆ ಮಾಡಲಿ. ತಕ್ಷಣ ಸಂಸದರು ಹಾಗೂ ಶಾಸಕರು ಸೇರಿ ಎಲ್ಲರೊಂದಿಗೆ ಚರ್ಚಿಸಿ ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾಗಬೇಕೆಂದು ನಾವು ಒತ್ತಾಯ ಮಾಡುತ್ತಿದ್ದೇವೆ ಎಂದು ಶಾಸಕ ಯು ಟಿ ಖಾದರ್ ಹೇಳಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಮಹಾನಗರ ಪಾಲಿಕೆಗೆ ಇನ್ನೂ ಆಡಳಿತ ಅಧಿಕಾರಿಗಳ ನೇಮಕವಾಗಿಲ್ಲ. ನೇರವಾಗಿ ಸರ್ಕಾರವೇ ಮಹಾನಗರ ಪಾಲಿಕೆ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಉನ್ನತ ಮಟ್ಟದ ಅಧಿಕಾರಿಗಳು ಇಲ್ಲಿ ಮೊಕ್ಕಾಂ ಹೂಡಿ ಸಮಸ್ಯೆಗಳ ಪರಿಹಾರಕ್ಕೆ ಯೋಜನೆಗಳನ್ನು ರೂಪಿಸಬೇಕು. ಕೃಷಿ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಇಲ್ಲಿನ ಸಮಸ್ಯೆಗಳ ಪರಿಹಾರ ಕೈಗೊಳ್ಳಬೇಕು. ಬಹಳಷ್ಟು ವರ್ಷಗಳಿಂದ ಈ ತ್ಯಾಜ್ಯರಾಶಿಯ ಘಟಕ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಮಂದಾರ ಪ್ರದೇಶದ ಜನರು ಮೂಲತಃ ಕೃಷಿಕರು. ಅವರಿಗೆ ಕೃಷಿ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಇಲ್ಲಿಗೆ ಕನಿಷ್ಠ ನೂರು ಕೋಟಿ ರೂ. ಪ್ಯಾಕೇಜ್ ನೀಡಬೇಕು. ಇಲ್ಲಿನ ಜನರು ಪುನರ್ವಸತಿ ಕಟ್ಟಿಕೊಳ್ಳಲು ವ್ಯವಸ್ಥೆ ಮಾಡಬೇಕು. ಸರ್ಕಾರವೇ ಪ್ರವೇಶಿಸಿ, ಅಧಿಕಾರಿಗಳ ತಂಡ ರಚಿಸಿ ಕೆಲಸ ಮಾಡಬೇಕಾದ ಅಗತ್ಯವಿದೆ. ಈ ಪರಿಸರದ ಜನರ ಜೊತೆಯಲ್ಲಿ ನಾವಿದ್ದೇವೆ. ಸರ್ಕಾರ ಇದಕ್ಕೆ ಶೀಘ್ರ ಸ್ಪಂದನೆ ನೀಡಬೇಕು. ಸರ್ಕಾರದ ಕೈಯಲ್ಲಿರುವ ಅಧಿಕಾರಿಗಳು ಇದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭ ಕಾಂಗ್ರೆಸ್ ಪಕ್ಷದ ಸಮಿತಿಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಮೇಯರ್‌ಗಳಾದ ಕವಿತಾ ಸನಿಲ್, ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯ್ಲಿ, ನವೀನ್ ಡಿಸೋಜಾ, ಲತೀಫ್ ಕಂದಕ್ ಮತ್ತಿತರರು ಉಪಸ್ಥಿತರಿದ್ದರು.