ಮಂಗಳೂರು: ಕಾಂಗ್ರೆಸ್ ಪಕ್ಷ ಬಡ ಜನರ ನಿಜವಾದಂತಹ ಬದುಕನ್ನು ಕಟ್ಟಿಕೊಟ್ಟಿದೆ. ಕಾರ್ಯಕರ್ತರು ಕಾಂಗ್ರೆಸ್ನ್ನು ಜನರ ಹತ್ತಿರ ಕೊಂಡೊಯ್ಯಬೇಕು. ಹಿಂದೆ ಕಟ್ಟಿದಂತಹ ಪಕ್ಷ ಸಂಘನೆಯ ಅಗತ್ಯ ಇದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.
ನಗರದ ಪುರಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾಯಕನನ್ನು ಹೊಗಳುವಂತಹ ಘೋಷಣೆ ಬೇಕಾಗಿಲ್ಲ. ಜನರ ಅಭಿವೃದ್ಧಿಗಾಗಿ ಕಾಂಗ್ರೆಸ್ ಏನು ತ್ಯಾಗ ಮಾಡಿದೆ ಎಂಬುದನ್ನು ತಿಳಿಸಿ. ಎಲ್ಲಾ ಕಡೆಗಳಲ್ಲಿಯೂ ಪ್ರಚಾರ ಮಾಡಿ. ಈ ರೀತಿಯ ತಯಾರಿ ಮಾಡಿದ್ದಲ್ಲಿ ಒಂದು ವರ್ಷದೊಳಗೆ ಕೇಂದ್ರದಲ್ಲಿಯೂ, ರಾಜ್ಯದಲ್ಲಿಯೂ ಕಾಂಗ್ರೆಸ್ ಮತ್ತೆ ಅಧಿಕಾರ ಸ್ಥಾಪಿಸುತ್ತದೆ ಎಂದು ಕಾರ್ಯಕರ್ತರಿಗೆ ಹೇಳಿದರು.
ಬಡವರ ಬಾಗಿಲಿಗೆ ಬ್ಯಾಂಕ್ ಹೋಗಲಿ ಎಂಬ ಉದ್ದೇಶದಿಂದ ಇಂದಿರಾ ಗಾಂಧಿಯವರು 1969ರಂದು 14 ಬ್ಯಾಂಕ್ಗಳ ರಾಷ್ಟ್ರೀಕರಣ ಮಾಡಿದರು. ಅಲ್ಲಿಯವರೆಗೆ ಬ್ಯಾಂಕ್ಗಳು ವಾಣಿಜ್ಯ ಉದ್ದೇಶ ಹೊಂದಿತ್ತು. ದಕ್ಷಿಣ ಕನ್ನಡ ಜಿಲ್ಲೆಯು ಬ್ಯಾಂಕುಗಳ ತವರೂರು ಆಗಿತ್ತು. ಇಂದು ಬಿಜೆಪಿ ಸರಕಾರ ಬ್ಯಾಂಕ್ಗಳನ್ನು ವಿಲೀನಗೊಳಿಸುತ್ತಿದೆ. ಈಗ ಕೆನರಾ, ಸಿಂಡಿಕೇಟ್, ಕಾರ್ಪೊರೇಷನ್ ಮುಂತಾದ ಬ್ಯಾಂಕ್ ಗಳನ್ನು ವಿಲೀನಗೊಳಿಸುತ್ತಿದ್ದಾರೆ ಇದು ಸರಿಯಾದ ನಿಯಮವಲ್ಲ ಎಂದರು.