ಪುತ್ತೂರು: ಗೇರು ಕೃಷಿಕರ ಕುರಿತು ಸರ್ಕಾರದ ಮಟ್ಟದಲ್ಲಿ ಧ್ವನಿ ಇಲ್ಲದಿರುವ ನಿಟ್ಟಿನಲ್ಲಿ ಅಖಿಲ ಭಾರತ ಗೇರು ಬೆಳೆಗಾರರ ಸಂಘವೊಂದನ್ನು ರಚಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ತಿಳಿಸಿದ್ದಾರೆ.
ಇಂದು ಸಂಘದ ನೋಂದಣಿ ಕಾರ್ಯ ಕೂಡ ನಡೆದಿದೆ. ಇನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೇರು ಕೃಷಿ ನಿರ್ಲಕ್ಷ್ಯಕ್ಕೊಳಗಾಗಿದ್ದು, ಈ ಕುರಿತು ಧ್ವನಿ ಎತ್ತುವವರಿಲ್ಲದಾಗಿದೆ. ದೇಶಾದ್ಯಂತ ಗೇರಿಗೆ ಬೇಡಿಕೆಯಿದ್ದರೂ ಬೇಡಿಕೆಗೆ ತಕ್ಕ ಉತ್ಪಾದನೆ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿ, ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ಪ್ರೇರಣೆಯಿಂದ ಸಂಘ ಸ್ಥಾಪಿಸಲಾಗಿದೆ ಎಂದರು.
ಇನ್ನು ಕಚ್ಚಾ ಗೇರುಬೀಜ ಕೆಜಿಗೆ ಕನಿಷ್ಠ 150 ರೂ. ಬೆಂಬಲ ಬೆಲೆ ಘೋಷಿಸಬೇಕು, ಆಫ್ರಿಕ ಮತ್ತಿತರ ದೇಶಗಳಿಂದ ಆಮದಾಗುತ್ತಿರುವ ಕಚ್ಚಾ ಗೇರುಬೀಜದ ಮೇಲೆ 5 ಶೇ. ಆಮದು ಸುಂಕ ವಿಧಿಸಬೇಕು ಹಾಗೂ ಭಾರತೀಯ ಗೇರು ಬೀಜಕ್ಕಿಂತ ಕಳಪೆ ಗುಣಮಟ್ಟದ ಸಂಸ್ಕರಿತ ಗೇರು ಬೀಜವನ್ನು ವಿಯೆಟ್ನಾಂ ಮತ್ತಿತರ ದೇಶಗಳಿಂದ ತರಿಸುವುದನ್ನು ನಿಲ್ಲಿಸಬೇಕು ಎಂಬ ಮೂರು ಬೇಡಿಕೆಗಳನ್ನು ಪ್ರಧಾನಿ ಕಾರ್ಯಾಲಯಕ್ಕೆ ಟ್ವಿಟ್ಟರ್ ಮೂಲಕ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಮಾತನಾಡಿ, ಸಮಗ್ರ ಕೃಷಿಯಲ್ಲಿ ರೈತರಿಗೆ ಒತ್ತು ನೀಡುವ ನಿಟ್ಟಿನಲ್ಲಿ ತೆಂಗು, ಗೇರು ಖರೀದಿ ಮಾಡಲು ಕ್ಯಾಂಪ್ಕೋ ಸಂಸ್ಥೆಯ ಮಹಾಸಭೆಯಲ್ಲಿ ಒಪ್ಪಿಗೆ ನೀಡಿದೆ. ಇನ್ನು ಕಾರ್ಯಾರೂಪಕ್ಕೆ ತರುವುದೊಂದೇ ಬಾಕಿ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ದೇವಿಪ್ರಸಾದ್ ಕಲ್ಲಾಜೆ, ಖಜಾಂಚಿ ಸುಭಾಸ್ ರೈ ಕಡಮಜಲು, ಟ್ರಸ್ಟಿ ಸುಕನ್ಯಾ ಮತ್ತಿತರರು ಉಪಸ್ಥಿತರಿದ್ದರು.