ಪುತ್ತೂರು : ಕೆಮ್ಮಿಂಜಿ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕೆಮ್ಮಿಂಜೆ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಆಯ್ಕೆಯಾಗಿದ್ದಾರೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಗೊಳಪಟ್ಟ ಕೆಮ್ಮಿಂಜೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಕಾರದ ನಿಯಾಮಾವಳಿಯಂತೆ ಪ.ಜಾತಿ ಮತ್ತು ಪ.ಪಂಗಡದಿಂದ ವಿಶ್ವನಾಥ ನಾಯ್ಕ್ ನೈತ್ತಾಡಿ, ಮಹಿಳಾ ಕ್ಷೇತ್ರದಿಂದ ವಿನುತಾ ಮೋಹನ್ ಹಾಗೂ ಟಿ.ಪ್ರೇಮಲತಾ ರಾವ್, ಸುಬ್ರಹ್ಮಣ್ಯ ಬಳ್ಳಕುರಾಯ, ದಯಾನಂದ ಎಂ, ವಿಶ್ವನಾಥ ಗೌಡ , ಚಂದ್ರಶೇಖರ ಕೆ, ಪಿ.ಆನಂದ ಪೂಜಾರಿ ಹಾಗೂ ಅರ್ಚಕ ಸ್ಥಾನಕ್ಕೆ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟೇಶ್ ಭಟ್ ಅವರನ್ನು ನೇಮಕಗೊಳಿಸಲಾಗಿದೆ.
ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಹಾಗೂ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಉಪ ತಹಶೀಲ್ದಾರ್ ಸುಲೋಚನ ಪಿ.ಕೆ ನೇತೃತ್ವದಲ್ಲಿ ನ.11 ರಂದು ದೇವಸ್ಥಾನದಲ್ಲಿ ಸಭೆ ನಡೆಸಿ, ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಆಡಳಿತಾಧಿಕಾರಿ ಸುಲೋಚನಾ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.
ಸಭೆ ಬಳಿಕ ಮಾತನಾಡಿದ ಮುರಳಿಕೃಷ್ಣ ಹಸಂತಡ್ಕ, ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯಡಿ 9 ಜನರ ನೂತನ ಸಮಿತಿಯನ್ನು ಮುಂದಿನ ಮೂರು ವರ್ಷಗಳ ಅವಧಿಗೆ ರಚಿಸಲಾಗಿದೆ, ದೇವಸ್ಥಾನ ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು.
ನೂತನ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಮಾತನಾಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಯ್ಕೆ ದೈವ ಸಂಕಲ್ಪದಂತೆ ನಡೆದಿದೆ. ಊರವರೇ ಸೇರಿಕೊಂಡು ತಮ್ಮ ಆರಾಧನಾ ಕ್ಷೇತ್ರಕ್ಕೆ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ. ಸಮಿತಿಯ ಪ್ರತಿಯೊಬ್ಬರೂ ಸಮರ್ಪಣಾ ಭಾವದಿಂದ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು. ನಗರ ಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್, ಬಾಲಚಂದ್ರ ಕರಿಯಾಳ, ಮಮತಾ ರಂಜನ್, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.