ಮಂಗಳೂರು: ನಿಗಮ ಮಂಡಳಿ ನೇಮಕಕ್ಕೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡುತ್ತೇವೆ. ಈ ಸಮಿತಿಯಲ್ಲಿ ಶಾಸಕರನ್ನು ಸೇರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು ದೆಹಲಿ ಸಭೆಗೂ ಶಾಸಕರ ಸಭೆಗೂ ಲಿಂಕ್ ಮಾಡುವುದು ಬೇಡ. ಶಾಸಕರ ಸಭೆಯಲ್ಲಿ ಶಾಸಕರು ಕ್ಷೇತ್ರದ ಸಮಸ್ಯೆ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬುಧವಾರ ದೆಹಲಿಯಲ್ಲಿ ಕರೆದಿದ್ದು ಲೀಡರ್ಗಳ ಸಭೆ. ದೆಹಲಿಯಲ್ಲಿ ಪಾರ್ಲಿಮೆಂಟ್ ಎಲೆಕ್ಷನ್ ಬಗ್ಗೆ ಚರ್ಚೆ ಮಾಡಲು ಸಭೆ ಕರೆದಿದ್ದಾರೆ. 37 ಜನ ಸೀನಿಯರ್ ಲೀಡರ್ಗಳ ಸಭೆ ಕರೆದಿದ್ದಾರೆ. ಇದರಲ್ಲಿ ಜಗದೀಶ್ ಶೆಟ್ಟರ್ ಕೂಡ ಒಬ್ಬರು. ಕ್ಯಾಂಡಿಡೇಟ್ ಬಗ್ಗೆ ಚರ್ಚೆ ಮಾಡಿಲ್ಲ. ಕೇವಲ ಚುನಾವಣೆ ಬಗ್ಗೆ ಚರ್ಚೆ ಅಷ್ಟೇ ಎಂದರು. ಇನ್ನು ಸಿಎಂ ಆದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಿಲ್ಲ. ಕಳೆದ ಬಾರಿ ದೆಹಲಿಗೆ ಹೋದಾಗ ಅವರು ವಿದೇಶಕ್ಕೆ ಹೋಗಿದ್ದರು. ಈ ಬಾರಿ ಅವರ ಭೇಟಿಗೆ ಸಮಯ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಎಲ್ಲೆಲ್ಲಿ ವಿದ್ಯಾರ್ಥಿಗಳಿಗೆ, ರೂಟ್ಗಳಿಗೆ ಬಸ್ ಅಗತ್ಯವಿದೆಯೋ ಅಲ್ಲಿ ಹೊಸ ಬಸ್ ಆರಂಭಿಸುವ ಚಿಂತನೆ ಇದೆ. ಇದಕ್ಕಾಗಿ ಹೊಸ ಬಸ್ ತೆಗೆದುಕೊಳ್ಳಲು ತೀರ್ಮಾನ ಮಾಡಿದ್ದೇವೆ. ಇಂದಿರಾ ಕ್ಯಾಂಟೀನ್ ಯಾವುದೇ ಬಾಕಿ ಇದ್ದರೂ ಚುಕ್ತಾ ಮಾಡುತ್ತೇವೆ. ಬಾಕಿ ಇದ್ದರೆ ನಮಗೆ ಹೇಳಲಿ, ಕೊಡುತ್ತೇವೆ ಎಂದು ಸಿಎಂ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ವೀಕ್ ಇಲ್ಲ. ರಾಜ್ಯದಲ್ಲಿ ಶೇ. 42.9 ರಷ್ಟು ಮತ ಪಡೆದಿದ್ದೇವೆ. ಬಿಜೆಪಿ ಪಡೆದದ್ದು ಶೇ.36 ರಷ್ಟು. ಅವರಿಗಿಂತ ಶೇ. 6 ರಷ್ಟು ಮತಗಳನ್ನು ಹೆಚ್ಚು ಪಡೆದಿದ್ದೇವೆ. ಕೇಂದ್ರದಲ್ಲಿ ಅಧಿಕಾರ ಮಾಡುವ ಪಕ್ಷ 8 ಜಿಲ್ಲೆಗಳಲ್ಲಿ ಶೂನ್ಯ ಸ್ಥಾನ ಪಡೆದಿದೆ ಎಂದರು. ಇನ್ನು ಚುನಾವಣೆ ವೇಳೆ ಕರಾವಳಿಗೆ ಘೋಷಿಸಲಾದ ಹತ್ತು ಘೋಷಣೆ ಜಾರಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ನನಗೆ ಗೊತ್ತಿಲ್ಲ. ಪರಮೇಶ್ವರ್ ಜೊತೆಗೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಇನ್ನು ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಕಸ್ತೂರಿ ರಂಗನ್ ವರದಿಯನ್ನು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ದೆಹಲಿ ಪ್ರವಾಸಕ್ಕೂ, ಶಾಸಕರ ಅಸಮಾಧಾನಕ್ಕೂ ಸಂಬಂಧವಿಲ್ಲ: ಸಚಿವ ಶಿವಾನಂದ ಪಾಟೀಲ
ಸಿಎಂಗೆ ಪತ್ರ ಬರೆದಿದ್ದ ಶಾಸಕರು: ಹಲವಾರು ಶಾಸಕರು ಅಸಮಾಧಾನಗೊಂಡು, ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರು ವಿನಂತಿ ಮಾಡಿಕೊಂಡಂತೆ ಸರ್ಕಾರಿ ನೌಕರರ ವರ್ಗಾವಣೆಯನ್ನೂ ಮಾಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದಿದ್ದರು. ಪಕ್ಷದ ಮೂಲಗಳ ಪ್ರಕಾರ, ಸಿಎಂಗೆ ಪತ್ರ ಬರೆದಿರುವ ಶಾಸಕರಲ್ಲೊಬ್ಬರಾದ ಪಾಟೀಲ್, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಸಚಿವರ ವಿರುದ್ಧ ಸಿಎಲ್‌ಪಿ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ತಮಗೆ ಪತ್ರ ಬರೆಯುವ ಅಗತ್ಯ ಏನಿತ್ತು ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದಾಗ, ಪಾಟೀಲರು ತಮ್ಮ ಹಕ್ಕು ಪ್ರತಿಪಾದಿಸಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: MLA B R Patil: ಆತ್ಮಗೌರವಕ್ಕೆ ಧಕ್ಕೆಯಾದಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದ್ದು ನಿಜ: ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್