ಮಂಗಳೂರು : ನಗರದಲ್ಲಿ ಸ್ವಚ್ಛತೆ ಸಂಪೂರ್ಣ ನಿಷ್ಕ್ರಯವಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಮಂಗಳೂರು ಸ್ವಚ್ಛತೆಗೆ ಹೆಸರಾಗಿತ್ತು. ಬಿಜೆಪಿ ಅವಧಿಯಲ್ಲಿ ಸಂಪೂರ್ಣ ನಾಶವಾಗಿದೆ ಎಂದು ಮಾಜಿ ಶಾಸಕ ಜೆ ಆರ್ ಲೋಬೊ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್ ಆಡಳಿತದಲ್ಲಿರುವಾಗ ಸ್ವಚ್ಛತೆಯಲ್ಲಿ ಸಣ್ಣಪುಟ್ಟ ಲೋಪದೋಷಗಳಿದ್ದರೂ ಇಷ್ಟೊಂದು ಅಧಃಪತನದೆಡೆಗೆ ಸಾಗಿರಲಿಲ್ಲ. ದಿನವೂ ಕಸ ವಿಲೇವಾರಿ ಮಾಡಲಾಗುತ್ತಿತ್ತು. ಗುತ್ತಿಗೆದಾರರ ಸಮಸ್ಯೆಗಳಿಗೂ ಪರಿಹಾರ ಒದಗಿಸಲಾಗುತ್ತಿತ್ತು ಎಂದು ಹೇಳಿದರು.
ಮಂಗಳೂರು ನಗರ ಹಿಂದಿನಿಂದಲೂ ಸ್ವಚ್ಛತೆಗೆ ಹೆಸರಾಗಿದೆ. ಇದೀಗ ನಗರದ ಪರಿಸ್ಥಿತಿ ಸಂಪೂರ್ಣ ಬದಲಾವಣೆಯಾಗಿದೆ, ಅಧಃಪತನದೆಡೆಗೆ ಸಾಗುತ್ತಿದೆ. ಎಲ್ಲೆಂದರಲ್ಲಿ ಕಸದ ರಾಶಿಗಳು ಕಂಡು ಬರುತ್ತಿವೆ. ಬೀದಿ ನಾಯಿಗಳು ಕಸ ಎಳೆದು ಹಾಕಿರುವುದು, ಕಸ ವಿಲೇವಾರಿ ಆಗದೆ ಅಲ್ಲಲ್ಲಿ ತ್ಯಾಜ್ಯ ಎಸೆದಿರುವುದು ಕಂಡು ಬರುತ್ತಿದೆ ಎಂದರು.
2012ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಟೋಟಲ್ ಸ್ಯಾನಿಟೈಸೇಷನ್ ಕ್ಯಾಂಪೇನ್ ಎಂದು ಆರಂಭಿಸಿದ್ದರು. ಅದು 2014ರ ಕೊನೆಯವೆರೆಗೆ ನಿರ್ಮಲ್ ಭಾರತ ಅಭಿಯಾನ ಎಂದು ಮುಂದುವರಿದಿತ್ತು. 2014ರಲ್ಲಿ ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅದೇ ಯೋಜನೆಯನ್ನು ಸ್ವಚ್ಛ ಭಾರತ ಅಭಿಯಾನವಾಗಿ ಬದಲಾಯಿಸಿದರು.
ಈ ಯೋಜನೆಗೆ 620 ಬಿಲಿಯನ್ ರೂ. ಮೀಸಲಿಡಲಾಯಿತು. ಈ ಹಿನ್ನೆಲೆ ಮಂಗಳೂರಿನ ಸ್ವಚ್ಛತೆ ಬಗ್ಗೆ ಹೇಳುವುದಾದ್ರೆ ಬಿಲಿಯನ್‌ಗಟ್ಟಲೆ ಯೋಜನೆಯನ್ನು ಸ್ವಚ್ಛತೆಗೆ ವಿನಿಯೋಗಿಸಿದ್ದರೂ, ಮಂಗಳೂರು ಮಾತ್ರ ಅಧಃಪತನದೆಡೆಗೆ ಸಾಗುತ್ತಿದೆ ಎಂದರು.
ಸ್ವಚ್ಛತೆಯಲ್ಲಿ ಪ್ರಶಸ್ತಿ ಪಡೆದುಕೊಂಡ ಮಂಗಳೂರಿನಲ್ಲಿ ಇಂದು ಎಲ್ಲೆಂದರಲ್ಲಿ ಕಸ ಬಿಸಾಡಲಾಗುತ್ತಿದೆ. ಒಣಕಸ, ಹಸಿಕಸ ಬೇರೆಯದಾಗಿಯೇ ಕೊಡಬೇಕು ಎಂದು ಹೇಳಲಾಗುತ್ತಿದೆ. ಆದರೆ, ದಿನವೂ ಕಸ ಸಂಗ್ರಹಿಸುತ್ತಿಲ್ಲ. ತಿಂಗಳಿಗೆ ಮೂರು ಬಾರಿ ತ್ಯಾಜ್ಯ ವಿಲೇವಾರಿ ಕಾರ್ಮಿಕರು ಮುಷ್ಕರ ಹೂಡುತ್ತಿದ್ದಾರೆ.
ಆದರೆ, ಯಾವುದಕ್ಕೂ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಇನ್ನೂ ಮಾಡುತ್ತಿಲ್ಲ. ಮಂಗಳೂರು ಘನತ್ಯಾಜ್ಯ ವಿಲೇವಾರಿಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಜೆ ಆರ್ ಲೋಬೊ ಹೇಳಿದರು.